

ಬೆಂಗಳೂರು: "ಜನ ಸಿನಿಮಾ ನೋಡಿದ ಮೇಲೆ ಅವರಿಷ್ಟದಂತೆ ವಿಮರ್ಶೆ ಮಾಡುತ್ತಾರೆ. ಆದರೆ, ನಮ್ಮ "ತ್ರಿಕೋನ' ಸಿನಿಮಾ ನೋಡಿದ ಮೇಲೆ ಅವರನ್ನು ಅವರೇ ವಿಮರ್ಶೆ ಮಾಡಿಕೊಳ್ಳುತ್ತಾರೆ. ನಮ್ಮಲ್ಲೇನು ಕೊರತೆ ಇದೆ? ನಾನು ಮಾಡಿದ್ದು ಸರೀನಾ? ಎಂದು ಅವರಿಗವರೇ ಪ್ರಶ್ನೆ ಮಾಡಿಕೊಳ್ಳುತ್ತಾರೆ'- ಹೀಗೆ "ತ್ರಿಕೋನ'ದ ಬಗ್ಗೆ ಹೇಳಿಕೊಳ್ಳುತ್ತಾರೆ ನಿರ್ದೇಶಕ ಚಂದ್ರಕಾಂತ್.
ಅಂದಹಾಗೆ, "ತ್ರಿಕೋನ' ಚಿತ್ರ ನಾಳೆಯಿಂದ (ಏ. 8) ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ನೀಡುವ ನಿರ್ದೇಶಕರು, ಸಿನಿಮಾದೊಳಗೇನಿದೆ ಎಂಬುದನ್ನು ಅವರದೇ ಮಾತಿನಲ್ಲಿ ಸೂಚ್ಯವಾಗಿ ಹೇಳಿಕೊಂಡಿದ್ದಾರೆ.
"ಮನುಷ್ಯನ ಮನಸ್ಸಿಗೆ ಸಂಬಂಧಿಸಿದ ಚಿತ್ರವಿದು. ಮನಸು ಒಂದು ಗೆದ್ದಲು ಗೂಡಿದ್ದಂತೆ. ಅದನ್ನು ಆಗಾಗ ಶುಚಿಗೊಳಿಸುತ್ತಲೇ ಇರಬೇಕು. ಇಲ್ಲವಾದಲ್ಲಿ ಕಸ, ಕಡ್ಡಿ, ಕೀಟಗಳ ತಾಣವಾದಂತೆ, ಮನಸ್ಸಿನಲ್ಲಿಯೂ ದ್ವೇಷ, ಅಸೂಯೆ, ದುರಾಸೆ ಗುಣಗಳೇ ಹೆಚ್ಚಾಗುತ್ತವೆ. ಹಾಗೆ ಆಗಬಾರದೆಂದರೆ ಮನಸ್ಸಿಗೂ ಕೃಷಿಯ ಅವಶ್ಯಕತೆ ಇದೆ. ತಾಳ್ಮೆ ಎಂಬ ನೇಗಿಲಿನಿಂದ ವ್ಯವಸಾಯ ಮಾಡಿದರೆ, ಮನಸ್ಸು ಫಲವತ್ತಾಗಿರುತ್ತದೆ' ಎಂಬುದು ಅವರ ಮಾತು.
ಪ್ರಿಮೀಯರ್ ಶೋ: ಸಿನಿಮಾ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ರಾಜಾಜಿನಗರದ ಒರಾಯನ್ ಮಾಲ್ನಲ್ಲಿ ಗುರುವಾರವೇ ಚಿತ್ರದ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಸಂಜೆ 6.30ಕ್ಕೆ ಶುರುವಾಗುವ ಪ್ರದರ್ಶನದಲ್ಲಿ ನಿರ್ದೇಶಕ ದಿನಕರ್ ತೂಗುದೀಪ, ಅಚ್ಯುತ್ ರಾವ್, ಸುಧಾರಾಣಿ, ದೊಡ್ಡರಂಗೇಗೌಡ, ಸುಚೇಂದ್ರ ಪ್ರಸಾದ್ ಸೇರಿ ಹಲವರು ಭಾಗವಹಿಸಲಿದ್ದಾರೆ.