

ಬೆಂಗಳೂರು: ರಂಗಾಯಣ ರಘು, ರವಿಶಂಕರ್ ಹಾಗೂ ತಬಲಾ ನಾಣಿ ಅಭಿನಯದಲ್ಲಿ ಎರಡು ವರ್ಷಗಳ ಹಿಂದೆಯೇ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಎಂಬ ಚಿತ್ರ ಮಾಡಿಟ್ಟಿದ್ದರು ‘ರ್ಯಾಂಬೋ 2’ ಖ್ಯಾತಿಯ ಅನಿಲ್ ಕುಮಾರ್. ಚಿತ್ರ ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಕರೊನಾ ಬಂತು. ಈಗ ಎಲ್ಲ ಅಡೆತಡೆಗಳನ್ನು ದಾಟಿ, ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಮೊದಲ ಹಂತವಾಗಿ ‘ದುನಿಯಾ’ ವಿಜಯ್ ಮತ್ತು ಧನಂಜಯ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದೂ ಆಗಿದೆ. ಈ ಚಿತ್ರದ ಬಗ್ಗೆ ಮಾತನಾಡುವ ರಂಗಾಯಣ ರಘು, ‘ಕನ್ನಡದಲ್ಲಿ ಕಾಲಕಾಲಕ್ಕೆ ತಕ್ಕ ಹಾಗೆ ಉತ್ತಮ ಕಥೆಗಳುಳ್ಳ ಚಿತ್ರಗಳು ಬರುತ್ತವೆ. ಕನ್ನಡಿಗರು ಸಹ ಇಂಥ ಚಿತ್ರಗಳಿಗೆ ಜೈ ಎನ್ನುತ್ತಿದ್ದಾರೆ. ಈ ಚಿತ್ರವೂ ಗೆಲ್ಲುವ ಭರವಸೆ ಇದೆ’ ಎನ್ನುತ್ತಾರೆ ರಘು.
ರವಿಶಂಕರ್ ಪ್ರಕಾರ, ನಾಯಕ-ನಾಯಕಿ ಅಂತಿಲ್ಲದೆ ಕಥೆಯನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ವಣವಾಗಿರುವ ಚಿತ್ರ ‘ಕಾಣೆಯಾದವರ ಬಗ್ಗೆ ಪ್ರಕಟಣೆ’. ಇಂತಹ ಪ್ರಯತ್ನ ಮಾಡಿದ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಅವರು ಹಾರೈಸುತ್ತಾರೆ. ಇನ್ನು, ತಬಲಾ ನಾಣಿ ತಾವು ಇದುವರೆಗೂ ಪಾತ್ರಗಳಲ್ಲೇ, ಈ ಚಿತ್ರದಲ್ಲಿನ ಪಾತ್ರ ಮನಸ್ಸಿಗೆ ಹತ್ತಿರವಾಗಿದೆ ಎನ್ನುತ್ತಾರೆ.
ಈ ಚಿತ್ರವನ್ನು ಜಿತೇಂದ್ರ ಮಂಜುನಾಥ್ ನಿರ್ವಿುಸಿದ್ದು, ತಿಲಕ್, ಆಶಿಕಾ ರಂಗನಾಥ್ ಮುಂತಾದವರು ನಟಿಸಿದ್ದಾರೆ.