ಡೈನಾಮಿಕ್ ಅಬ್ಬರ: ಪ್ರಜ್ವಲ್ ಹೊಗಳಿದ ನಾಯಕಿಯರು, ದೇವರಾಜ್ ಸಂತಸ

Prajwal
Published on

ಬೆಂಗಳೂರು: ಪ್ರಜ್ವಲ್ ದೇವರಾಜ್ ನಾಯಕರಾಗಿರುವ ಚಿತ್ರ ‘ಅಬ್ಬರ’. ರಾಮ್ಾರಾಯಣ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ಮೂರು ಶೇಡ್​ಗಳಲ್ಲಿ ಕಾಣಿಸಿಕೊಂಡಿದ್ದು, ಮೂವರು ನಾಯಕಿಯರೊಂದಿಗೆ ನಟಿಸಿದ್ದಾರೆ. ಇತ್ತೀಚೆಗಷ್ಟೆ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕಿಯರಾದ ಲೇಖಚಂದ್ರ, ನಿಮಿಕಾ ರತ್ನಾಕರ್ ಮತ್ತು ರಾಜಶ್ರೀ ಪೊನ್ನಪ್ಪ ಪ್ರಜ್ವಲ್ ಅವರ ವ್ಯಕ್ತಿತ್ವ, ಗುಣಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮಕ್ಕೆ ಪ್ರಜ್ವಲ್ ತಂದೆ ದೇವರಾಜ್, ತಾಯಿ ಚಂದ್ರಲೇಖಾ, ಪತ್ನಿ ರಾಗಿಣಿ, ಸಹೋದರ ಪ್ರಣಾಮ್ ಕೂಡ ಆಗಮಿಸಿದ್ದರು. ಮಗನ ಕುರಿತು ನಟಿಯರು ಮಾತನಾಡಿದ್ದನ್ನು ಕೇಳಿ ಸಂತಸಗೊಂಡ ದೇವರಾಜ್, ‘ಒಬ್ಬ ಕಲಾವಿದನಾಗಿ ಈ ಚಿತ್ರರಂಗದಲ್ಲಿ ಪಡೆದಿರುವಂತ ಅನುಭವದಲ್ಲಿ ಇಲ್ಲಿ ಏನೆಲ್ಲಾ ನಡೆಯುತ್ತೆ? ಎಷ್ಟು ಕಷ್ಟಗಳಿರುತ್ತವೆ ಎಂಬುದು ಗೊತ್ತು. ಆದರೆ, ಚಿತ್ರದ ಮೂವರು ನಾಯಕಿಯರು ನಮ್ಮ ನಾಯಕನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದಾಗ ಕಲಾವಿದನಾಗಿ, ತಂದೆಯಾಗಿ ನನಗೆ ತುಂಬ ಸಂತೋಷ ವಾಯಿತು. ಪ್ರಜ್ವಲ್, ಇದೇ ರೀತಿಯ ಗುಣವಿಟ್ಟು ಕೊಂಡು ಮುಂದೆ ಹೋದರೆ, ನಿನ್ನ ಜೀವನ ಸುಂದರವಾಗಿರಲಿದೆ. ಕರಿಯರ್ ಏನಾದರೂ ಆಗಬಹುದು ಆದರೆ, ಯುವರ್ ಲೈಫ್ ವಿಲ್ ಬಿ ಬ್ಯೂಟಿಫುಲ್’ ಎಂದರು.

ಹಾಗೆಯೇ ಚಿತ್ರದ ಬಗ್ಗೆ ಮಾತನಾಡುತ್ತಾ ‘‘ಅಬ್ಬರ’ ಟೈಟಲ್ ಕಮರ್ಷಿಯಲ್ ಆಗಿ ಚೆನ್ನಾಗಿದೆ. ಹಾಡುಗಳು ಸುಂದರವಾಗಿ ಮೂಡಿಬಂದಿವೆ. ಹೀರೋ, ಹೀರೋಯಿನ್​ಗಳು ಸುಂದರವಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೀಗ ಶುಕ್ರದೆಸೆ. ಕನ್ನಡ ಸಿನಿಮಾಗಳನ್ನು ಇಡೀ ದೇಶದಲ್ಲಿ ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಪ್ರಪಂಚದಾದ್ಯಂತ ಜನ ನೋಡುತ್ತಿದ್ದಾರೆ. ಈ ಚಿತ್ರಕ್ಕೂ ಆ ಶುಕ್ರದೆಸೆ ಸಿಗಲಿ’ ಎಂದು ಶುಭಹಾರೈಸಿದರು. ಅಂದಹಾಗೆ ‘ಅಬ್ಬರ’ ಇದೇ ತಿಂಗಳ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net