ಮೂರು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಹಿಂದಿರುಗಿಸಿದ ಟಾಮ್ ಕ್ರೂಸ್

Tom Cruise - Final
Published on

ವಾಷಿಂಗ್​ಟನ್​: ಹಾಲಿವುಡ್​ನ ಅತ್ಯಂತ ಜನಪ್ರಿಯ ಹೀರೋಗಳ ಪೈಕಿ ಟಾಮ್​ ಕ್ರೂಸ್​ ಸಹ ಒಬ್ಬರು. ತಮ್ಮ ಜನಪ್ರಿಯ ಚಿತ್ರಗಳು ಮತ್ತು ಪಾತ್ರ ಪೋಷಣೆಯ ಮೂಲಕ ಸಾಕಷ್ಟು ಜನಪ್ರಿಯರಾಗಿರುವ ಟಾಮ್​, ಇದೀಗ ತಮಗೆ ಸಿಕ್ಕಿರುವ ಮೂರು ಗೋಲ್ಡನ್​ ಗ್ಲೋಬ್​ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ.

ಹಾಲಿವುಡ್​ ಫಾರಿನ್​ ಪ್ರೆಸ್​ ಅಸೋಸಿಯೇಷನ್​ ಸಂಸ್ತೆಯು ಗೋಲ್ಡನ್​ ಗ್ಲೋಬ್​ ಪ್ರಶಸ್ತಿಗಳನ್ನು ಪ್ರತೀವರ್ಷ ಕೊಡುತ್ತಾ ಬಂದಿದೆ. ಆದರೆ, ಈಗ ಸಂಸ್ಥೆಯಲ್ಲಿ ವರ್ಣಭೇದ, ಭ್ರಷ್ಟಾಚಾರ ಪ್ರಕರಣಗಳು ಹೆಚ್ಚಿವೆ ಎಂದು ಕೇಳಿಬಂದಿದೆ. ಕಪ್ಪುವರ್ಣೀಯರಿಗೆ ಈ ಸಂಸ್ಥೆಯಲ್ಲಿ ಅವಕಾಶವನ್ನೇ ಕೊಡಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಇದನ್ನು ಖಂಡಿಸಿ ಹಲವರು ಸಂಸ್ಥೆಯ ಜತೆಗೆ ತಮ್ಮ ಒಡನಾಟವನ್ನು ಕಡಿದುಕೊಂಡಿದ್ದಾರೆ. ಸ್ಕಾರ್ಲೆಟ್ ಜಾನ್‌ಸನ್, ಮಾರ್ಕ್ ರಫೆಲೊ ಹಾಗೂ ಇನ್ನೂ ಕೆಲವರು ತಮಗೆ ದೊರಕಿದ್ದ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದಾರೆ. ಈಗ ಆ ಸಾಲಿಗೆ ಟಾಮ್​ ಕ್ರೂಸ್​ ಸಹ ಸೇರಿಕೊಂಡಿದ್ದಾರೆ. ಬಾರ್ನ್​ ಆನ್​ ದಿ ಫೋರ್ಥ್​ ಜುಲೈ, ಜೆರ್ರಿ ಮ್ಯಾಗ್ಯೂರ್​ ಮತ್ತು ಮ್ಯಾಗ್ನೋಲಿಯಾ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಕ್ರೂಸ್​ಗೆ ಗೋಲ್ಡನ್​ ಗ್ಲೋಬ್​ ಪ್ರಶಸ್ತಿ ಸಿಕ್ಕಿತ್ತು.

ಬರೀ ಕಲಾವಿದರಷ್ಟೇ ಅಲ್ಲ, ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭವನ್ನು ಪ್ರಸಾರ ಮಾಡುತ್ತಿದ್ದ ಎನ್‌ಬಿಸಿಯು 2022ರ ಸಾಲಿನ ಗೋಲ್ಡನ್ ಗ್ಲೋಬ್ ಸಮಾರಂಭವನ್ನು ಪ್ರಸಾರ ಮಾಡುವುದಿಲ್ಲ ಎಂದು ಹೇಳಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ಸೇರಿದಂತೆ ಕೆಲವು ಒಟಿಟಿಗಳು ಸಹ ತಾವು ಎಚ್‌ಎಫ್‌ಪಿಎ ಜೊತೆಗಿನ ನಂಟು ಕಡಿದುಕೊಳ್ಳುತ್ತಿರುವುದಾಗಿ ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net