ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಗೌರವ ಕೊಡಿ: ವಿಜಯ್​-ತ್ರಿಷಾ ಪರ ನಿಂತ ನಿರ್ದೇಶಕ ವಿಕ್ರಮ್​ ಭಟ್​ | Vikram Bhatt

ನಮಗೆ ಅವರ ಸಿನಿಮಾ ಮುಖ್ಯ ಅವರ ವೈಯಕ್ತಿಕ ಜೀವನವಲ್ಲ ಎಂದ ನಿರ್ದೇಶಕ ವಿಕ್ರಮ್​ ಭಟ್​ (Vikram Bhatt)
ನಮಗೆ ಅವರ ಸಿನಿಮಾ ಮುಖ್ಯ ಅವರ ವೈಯಕ್ತಿಕ ಜೀವನವಲ್ಲ ಎಂದ ನಿರ್ದೇಶಕ ವಿಕ್ರಮ್​ ಭಟ್​ (Vikram Bhatt)
Published on

ಪ್ರಮುಖ ಮುಖ್ಯಾಂಶಗಳು

  • ವಿಜಯ್​ ಜೊತೆ ವಿಚ್ಛೇಧನಕ್ಕೆ ಮುಂದಾಗಿರುವ ಪತ್ನಿ ಸಂಗೀತಾ
  • ನಟ ವಿಜಯ್ ಮತ್ತು ನಟಿ ತ್ರಿಷಾ ನಡುವೆ ಸಂಬಂಧವಿರುವ ಆರೋಪ
  • ನಮಗೆ ಅವರ ಸಿನಿಮಾ ಮುಖ್ಯ ಅವರ ವೈಯಕ್ತಿಕ ಜೀವನವಲ್ಲ ಎಂದ ನಿರ್ದೇಶಕ ವಿಕ್ರಮ್​ ಭಟ್​
ಮುಂಬೈ: ದಳಪತಿ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಅವರ ವೈಯಕ್ತಿಕ ಜೀವನ ಇದೀಗ ಸೌತ್ ಇಂಡಿಯನ್ ಸಿನಿ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿಯೂ ದೊಡ್ಡ ಸುದ್ದಿಯಾಗಿದೆ.
ವಿಜಯ್ ಅವರ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ವಿಷಯ ಹೊರಬಿದ್ದ ಬೆನ್ನಲ್ಲೇ, ವಿಜಯ್ ಮತ್ತು ತ್ರಿಷಾ ಅವರ ದೀರ್ಘಕಾಲದ ವದಂತಿಗಳಿಗೆ ಮತ್ತಷ್ಟು ಬಲ ಸಿಕ್ಕಿದೆ. ಈ ಸಂಕೀರ್ಣ ಪರಿಸ್ಥಿತಿಯ ನಡುವೆ ಬಾಲಿವುಡ್​ ನಿರ್ದೇಶಕ ವಿಕ್ರಮ್ ಭಟ್ (Vikram Bhatt) ಸಾರ್ವಜನಿಕರಿಗೆ ಒಂದು ಸಂದೇಶ ರವಾನಿಸಿದ್ದಾರೆ.

ಸಿನಿಮಾ ಬಗ್ಗೆ ಮಾತಾಡಿ, ವೈಯಕ್ತಿಕ ಬದುಕಿನ ಬಗ್ಗೆಯಲ್ಲ!

ಈ ಗೊಂದಲದ ಸಮಯದಲ್ಲಿ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ವಿಕ್ರಮ್ ಭಟ್, ನಟರ ಸಿನಿಮಾಗಳು ನಮಗೆ ಸೇರಿವೆ, ಆದರೆ ಅವರ ಜೀವನವಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ವಿಜಯ್ ಮತ್ತು ತ್ರಿಷಾ ಅವರ ವೈಯಕ್ತಿಕ ಬದುಕಿನ ಬಗ್ಗೆ ನಡೆಯುತ್ತಿರುವ ಚರ್ಚೆಗಳು ಸರಿಯಲ್ಲ. ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವದಂತಿಗಳು ನಿಜವೋ ಅಥವಾ ಸುಳ್ಳೋ ನನಗಂತೂ ತಿಳಿದಿಲ್ಲ. ಆದರೆ, ಇಬ್ಬರು ವ್ಯಕ್ತಿಗಳು ಸಂಬಂಧದಲ್ಲಿ ಸಿಕ್ಕಿಹಾಕಿಕೊಂಡು, ಸಮಾಜದ ಒತ್ತಡಕ್ಕೆ ಮಣಿದು ಬದುಕುತ್ತಿದ್ದರೆ, ಅದು ಒಂದು ರೀತಿಯ ಸೆರೆವಾಸವೇ ಸರಿ.
ಹೃದಯ ತನ್ನ ಸಂತೋಷವನ್ನು ಹುಡುಕಿಕೊಂಡು ಹೋಗುತ್ತದೆ, ಅದಕ್ಕೆ ತಡೆಯೊಡ್ಡುವ ಹಕ್ಕು ನಮಗಿಲ್ಲ, ಎಂದು ವಿಕ್ರಮ್ ಭಟ್ ತಮ್ಮದೇ ಶೈಲಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

25 ವರ್ಷಗಳ ದಾಂಪತ್ಯದಲ್ಲಿ ಬಿರುಕು

ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುಮಾರು 25 ವರ್ಷ ಕಳೆದಿದೆ. ಜುಲೈ 1998ರಲ್ಲಿ ರಿಜಿಸ್ಟರ್ ಆಗಿ, 1999ರಲ್ಲಿ ಚೆನ್ನೈನಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಈ ಜೋಡಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.
ಆದರೆ, ಈಗ ಸಂಗೀತಾ ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ಗಂಭೀರ ಆರೋಪಗಳಿವೆ. 2021 ರಿಂದ ವಿಜಯ್ ಭಾವನಾತ್ಮಕವಾಗಿ ದೂರವಾಗಿದ್ದಾರೆ ಮತ್ತು ವೈವಾಹಿಕ ಜೀವನದಲ್ಲಿ ಅಗೌರವ ತೋರಿಸುತ್ತಿದ್ದಾರೆ ಎಂಬುದು ಸಂಗೀತಾ ಅವರ ಆರೋಪ. ಏಪ್ರಿಲ್ 20, 2026 ಕ್ಕೆ ಈ ಪ್ರಕರಣದ ವಿಚಾರಣೆ ನಡೆಯಲಿದೆ.

ಕಾರಿನಲ್ಲಿ ಒಟ್ಟಿಗೆ ಬಂದಿದ್ದೇ ವಿವಾದ

ಇತ್ತೀಚೆಗೆ ನಿರ್ಮಾಪಕ ಕಲ್ಪತಿ ಸುರೇಶ್ ಅವರ ಮಗನ ವಿವಾಹ ಆರತಕ್ಷತೆಯಲ್ಲಿ ವಿಜಯ್ ಮತ್ತು ತ್ರಿಷಾ ಒಂದೇ ಕಾರಿನಲ್ಲಿ ಬಂದು, ವೇದಿಕೆಯ ಮೇಲೆ ಒಟ್ಟಿಗೆ ಪೋಸ್ ನೀಡಿದ್ದು, ಇವರಿಬ್ಬರ ಸಂಬಂಧಕ್ಕೆ ಪುಷ್ಟಿ ನೀಡಿದಂತಾಗಿದೆ. ಇದು ಸಂಗೀತಾ ಅವರ ಕೋಪಕ್ಕೆ ಕಾರಣವಾಗಿದ್ದು, ಈ ಸಂಬಂಧ ತಮ್ಮ ಮಕ್ಕಳಿಗೆ ಮುಜುಗರ ತರುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಒಟ್ಟಿನಲ್ಲಿ, ವಿಜಯ್ ಅವರ ವೈಯಕ್ತಿಕ ಜೀವನ ಇದೀಗ ಕವಲು ದಾರಿಯಲ್ಲಿದೆ. ಕೋರ್ಟ್ ವಿಚಾರಣೆ ಏಪ್ರಿಲ್‌ಗೆ ಮುಂದೂಡಲ್ಪಟ್ಟಿದ್ದರೂ, ಸಾರ್ವಜನಿಕವಾಗಿ ಈ ಚರ್ಚೆ ಮಾತ್ರ ತಣ್ಣಗಾಗುವ ಲಕ್ಷಣಗಳೇ ಇಲ್ಲ. ತಾರಾ ಜೋಡಿಯ ಈ ವೈಯಕ್ತಿಕ ಸಂಘರ್ಷ ಅಂತಿಮವಾಗಿ ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net