

ಬೆಂಗಳೂರಿನಲ್ಲಿ ಸಿನಿಮಾ ಮಾರುಕಟ್ಟೆ ಎಲ್ಲ ಭಾಷಿಕರಿಗೂ ಮುಕ್ತವಾಗಿದೆ. ಕನ್ನಡದ ಜತೆಗೆ ಪರಭಾಷೆ ಸಿನಿಮಾಗಳಿಗೂ ಬೆಂಗಳೂರು ಕೆಂಪು ಹಾಸಿನ ವೇದಿಕೆ ಇದ್ದಂತೆ. ಈಗ ಅದರಿಂದ ಲಾಭ ಪಡೆದುಕೊಳ್ಳಲು ಟಾಲಿವುಡ್ ನಟ ಮಹೇಶ್ ಬಾಬು ಮುಂದಾಗಿದ್ದಾರೆ. ಗಾಂಧಿನಗರದ ಹೃದಯ ಭಾಗದಲ್ಲಿನ ‘ಕಪಾಲಿ’ ಚಿತ್ರಮಂದಿರವಿದ್ದ ಸ್ಥಳದಲ್ಲಿ ‘ಎಎಂಬಿ ಸಿನಿಮಾಸ್’ ಹೆಸರಿನ ಮಲ್ಟಿಪ್ಲೆಕ್ಸ್ ನಿರ್ವಿುಸಲು ಪ್ಲಾ್ಯನ್ ರೂಪಿಸಿದ್ದಾರಂತೆ.
ಗಾಂಧಿನಗರದಲ್ಲಿನ ಅತಿದೊಡ್ಡ ಚಿತ್ರಮಂದಿರ ಎಂದೇ ಹೆಸರಾಗಿದ್ದ್ದ ಸುಬೇದಾರ್ ಛತ್ರ ರಸ್ತೆಯಲ್ಲಿನ ‘ಕಪಾಲಿ’ ಟಾಕೀಸ್ 2017ರಲ್ಲಿ ತನ್ನ ‘ಕಡೇ ಆಟ’ ಮುಗಿಸಿತ್ತು. ಅಂದರೆ, ಚಿತ್ರಮಂದಿರ ಸ್ಥಗಿತಗೊಂಡಿದ್ದು ಆ ಸ್ಥಳದಲ್ಲಿ ಬೃಹತ್ ಮಲ್ಟಿಪ್ಲೆಕ್ಸ್ ತಲೆ ಎತ್ತಲಿದೆ ಎಂಬ ಮಾತು ಚಾಲ್ತಿಯಲ್ಲಿದೆ. ಈಗ ಅದೇ ಜಾಗದ ಮೇಲೆ ಟಾಲಿವುಡ್ ನಟ ಮಹೇಶ್ ಬಾಬು ಕಣ್ಣು ಬಿದ್ದಿದೆ. ಹೈದರಾಬಾದ್ನಲ್ಲಿ ಈಗಾಗಲೇ ಮಲ್ಟಿಪ್ಲೆಕ್ಸ್ ಹೊಂದಿರುವ ಅವರು ಸ್ಯಾಂಡಲ್ವುಡ್ನ ಹೃದಯಭಾಗವಾದ ಗಾಂಧಿನಗರದಲ್ಲೂ ಮಲ್ಟಿಪ್ಲೆಕ್ಸ್ ನಿರ್ವಿುಸುವ ಲೆಕ್ಕಾಚಾರದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ನಟನೆ-ನಿರ್ವಣದ ಜತೆಗೆ ಮಲ್ಟಿಪ್ಲೆಕ್ಸ್ ಉದ್ಯಮಕ್ಕೂ ಇಳಿದಿರುವ ಮಹೇಶ್ ಬಾಬು, 2018ರ ಡಿಸೆಂಬರ್ನಲ್ಲಿ ಹೈದರಾಬಾದ್ನ ಗಚ್ಚಿಬೌಲಿಯಲ್ಲಿ ‘ಎಎಂಬಿ ಸಿನಿಮಾಸ್’ ಹೆಸರಿನ ಐಷಾರಾಮಿ ಮಲ್ಟಿಪ್ಲೆಕ್ಸ್ ತೆರೆದಿದ್ದರು. ಈಗ ಆ ಉದ್ಯಮವನ್ನು ವಿಸ್ತರಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತದ ಹಲವೆಡೆ ಮತ್ತಷ್ಟು ಮಲ್ಟಿಪ್ಲೆಕ್ಸ್ ನಿರ್ವಿುಸಲು ಮಹೇಶ್ ಬಾಬು ಮನಸು ಮಾಡಿದ್ದಾರೆ. ಆ ಪೈಕಿ ತೆಲುಗು ಸಿನಿಮಾಗಳ ಕ್ರೇಜ್ ಹೆಚ್ಚಿರುವ ಬೆಂಗಳೂರನ್ನು ಅವರು ಆಯ್ದುಕೊಂಡಿದ್ದು, ‘ಕಪಾಲಿ’ ಚಿತ್ರಮಂದಿರವಿದ್ದ ಸ್ಥಳದಲ್ಲೇ ‘ಎಎಂಬಿ ಸಿನಿಮಾಸ್’ ನಿರ್ಮಾಣ ಆಗಲಿದೆ ಎಂಬ ಸುಳಿವು ಹೊರಬಿದ್ದಿದೆ.
ಬೆಂಗಳೂರಿನಲ್ಲೇ ಯಾಕೆ?
ಉದ್ಯಮಿಗಳು ತಮಗೆಲ್ಲಿ ಹೆಚ್ಚು ಲಾಭ ಸಿಗುತ್ತದೆ ಎಂಬುದನ್ನು ಆಧರಿಸಿಯೇ ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿ ತೆಲುಗು, ತಮಿಳು, ಹಿಂದಿ ಸಿನಿಮಾ ಪ್ರೇಕ್ಷಕರ ಸಂಖ್ಯೆಗೇನೂ ಕೊರತೆ ಇಲ್ಲ. ಅದರಲ್ಲೂ ತೆಲುಗು-ತಮಿಳು ಚಿತ್ರಗಳಿಗೆ ಬೆಂಗಳೂರು ಕೆಂಪು ಹಾಸಿನ ವೇದಿಕೆ ಇದ್ದಂತೆ. ಹೀಗಿರುವಾಗ ‘ಎಎಂಬಿ ಸಿನಿಮಾಸ್’ ಸ್ಥಾಪನೆಯಿಂದ ಪರಭಾಷಾ ಸಿನಿಮಾಗಳ ಪ್ರಸಾರಕ್ಕೆ ಮತ್ತಷ್ಟು ಮುಕ್ತ ವಾತಾವರಣ ಕಲ್ಪಿಸಿ ಕೊಡಲಿದೆಯೇ ಎಂಬ ಪ್ರಶ್ನೆ ಸದ್ಯ ಎದುರಾಗಿದೆ.
ಉದ್ಯಮದ ರೀತಿಯಲ್ಲಿ ನೋಡಬೇಕಷ್ಟೇ!
‘ಏಕಪರದೆ ಚಿತ್ರಮಂದಿರ ಇದ್ದ ಸ್ಥಳದಲ್ಲಿ ಮಲ್ಟಿಪ್ಲೆಕ್ಸ್ ನಿರ್ಮಾಣ ಆಗಲಿದೆ ಎಂಬ ಮಾತು ಒಂದೆಡೆಯಾದರೆ, ಈಗಾಗಲೇ ಹೈದರಾಬಾದ್ನಲ್ಲಿರುವ ಎಎಂಬಿ ಸಿನಿಮಾಸ್ನಂಥದ್ದೇ ಮಲ್ಟಿಪ್ಲೆಕ್ಸ್ ಬೆಂಗಳೂರಿನಲ್ಲಿ ಸ್ಥಾಪಿಸಲು ಮನಸು ಮಾಡಿರಬಹುದು. ಇದನ್ನು ಕೇವಲ ಉದ್ಯಮದ ದೃಷ್ಟಿಯಿಂದಷ್ಟೇ ನೋಡಬೇಕು. ಮುಂದಿನ ದಿನಗಳಲ್ಲಿ ಅದು ಆಗಿದ್ದೇ ನಿಜವಾದರೆ, ಗಾಂಧಿನಗರದ ಮುಖ್ಯಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದ ಕೆಲವು ತೆಲುಗು ಚಿತ್ರಗಳು ಆಗ ಎಎಂಬಿ ಸಿನಿಮಾಸ್ನಲ್ಲಿ ತೆರೆಕಾಣಲಿವೆ’ ಎಂಬುದು ವೀರೇಶ ಚಿತ್ರಮಂದಿರದ ಮಾಲೀಕ ಕೆ.ವಿ.ಚಂದ್ರಶೇಖರ್ ಅವರ ಅಭಿಪ್ರಾಯ.