

ಬೆಂಗಳೂರು: ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಸಿನಿಮಾದ ಅದ್ದೂರಿ ಮುಹೂರ್ತ ಇಂದು (ಅ. 24) ನಡೆಯಲಿದೆ. ಹುಬ್ಬಳ್ಳಿಯಲ್ಲಿ ನೆರವೇರಲಿರುವ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಕಲಾವಿದರ ಸಮಾಗಮವಾಗಲಿದೆ. ಹಿರಿಯ ನಟ ಅನಂತ್ ನಾಗ್, ‘ಕ್ರೇಜಿಸ್ಟಾರ್’ ರವಿಚಂದ್ರನ್, ಗೋಲ್ಡನ್ ಸ್ಟಾರ್ ಗಣೇಶ್, ನಟಿ ವಿನಯಾ ಪ್ರಸಾದ್ ಸೇರಿ ಹಲವರು ಮುಹೂರ್ತದಲ್ಲಿ ಭಾಗವಹಿಸಲಿದ್ದಾರೆ.
ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ‘ವಿಜಯಾನಂದ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ರಿಶಿಕಾ ಶರ್ಮ ಈ ಚಿತ್ರವನ್ನು ನಿರ್ದೇಶಿಸಿದರೆ, ವಿಜಯ ಸಂಕೇಶ್ವರ ಅವರ ಪಾತ್ರವನ್ನು ನಟ ನಿಹಾಲ್ ರಜಪೂತ್ ನಿಭಾಯಿಸಲಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಕಲಾವಿದರ ಆಯ್ಕೆ ಸೇರಿ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಚಿತ್ರತಂಡ, ಇದೀಗ ಚಿತ್ರೀಕರಣಕ್ಕೆ ಸಿದ್ಧವಾಗಿದೆ. ಇತ್ತೀಚೆಗಷ್ಟೇ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಬೃಹತ್ ಆಡಿಷನ್ ಏರ್ಪಡಿಸಲಾಗಿತ್ತು. ಈ ಎರಡು ಆಡಿಷನ್ನಲ್ಲಿ ಪ್ರತಿಭಾನ್ವಿತ ಕಲಾವಿದರ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಹುಬ್ಬಳ್ಳಿ, ಧಾರವಾಡ, ಶಿಗ್ಗಾಂವಿ, ಬೆಂಗಳೂರು, ಹೈದರಾಬಾದ್ಗಳಲ್ಲೂ ಚಿತ್ರೀಕರಣ ಮಾಡುವುದು ತಂಡದ ಪ್ಲಾನ್. ಅಷ್ಟೇ ಅಲ್ಲದೆ, ಹುಬ್ಬಳ್ಳಿ ಮತ್ತು ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ 70ರ ದಶಕದ ಹುಬ್ಬಳ್ಳಿಯ ಮಾರುಕಟ್ಟೆ ಹೋಲುವ ಸೆಟ್ ಸೇರಿ 10ರಿಂದ 15 ಬೃಹತ್ ಸೆಟ್ ನಿರ್ವಿುಸಲಾಗಿದೆ. ಸೋಮವಾರದಿಂದ ಶೂಟಿಂಗ್ ಶುರುವಾದರೆ, ಜನವರಿವರೆಗೂ ಚಿತ್ರೀಕರಣ ನಡೆಯಲಿದೆ.