

ಬೆಂಗಳೂರು: ಲಾಕ್ಡೌನ್ ನಂತರ ಕನ್ನಡದಲ್ಲಿ ಯಾವ ಚಿತ್ರವೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಿಡುಗಡೆಯಾಗಿರಲಿಲ್ಲ. ಈಗ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರವು ತಮಿಳು-ತೆಲುಗಿಗೆ ಡಬ್ ಆಗಿ, ಏಕಕಾಲಕ್ಕೆ ಮೂರು ಭಾಷೆಗಳಲ್ಲಿ, ನಾಲ್ಕು ರಾಜ್ಯಗಳಲ್ಲಿ, ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಬಿಗ್ ಚಿತ್ರ ಎಂದೆನಿಸಿಕೊಂಡಿದೆ. ಚಿತ್ರದ ಬಗ್ಗೆ ಎಗ್ಸೆ ೖಟ್ವೆುಂಟ್ಗಿಂಥ ಭಯ ಜಾಸ್ತಿ ಇದೆ ಎನ್ನುತ್ತಾರೆ ನಿರ್ದೇಶಕ ನಂದಕಿಶೋರ್. ‘ನಿಜಕ್ಕೂ ಬಹಳ ಭಯವಾಗಿದೆ. ಫಸಲಿಗೆ ಕಾಯುತ್ತಿರುವ ರೈತನ ತರಹ ಕುತೂಹಲದಿಂದ ಕಾಯುತ್ತಿದ್ದೇನೆ. ಈ ಚಿತ್ರದ ಹಿಂದೆ ನಾಲ್ಕು ವರ್ಷಗಳ ಶ್ರಮ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಒಳಗೆ ತುಂಬ ನೋವಿದೆ. ನಾನು ಮಾಡಿದ ಕೆಲಸಕ್ಕೆ ಬಹಳಷ್ಟು ಜನ ಕ್ರೆಡಿಟ್ ತೆಗೆದುಕೊಂಡಿದ್ದಾರೆ. ನನಗೇನು ಬರುವುದಿಲ್ಲ ಎಂದು ಹೇಳಿಕೊಂಡು ಓಡಾಡಿದ್ದಾರೆ. ನಾನು ನಾಚಿಕೆ ಸ್ವಭಾವದವನು. ಪಬ್ಲಿಸಿಟಿಯಿಂದ ದೂರವಿರುವವನು. ನೀನು ಸರಿ ಇಲ್ಲ ಎಂದರೆ ಬೇಸರವಿಲ್ಲ. ಆದರೆ, ಕೆಲಸ ಗೊತ್ತಿಲ್ಲ ಅಂದಾಗ, ನಾನು ಪಟ್ಟಿರುವ ನೋವು ಅಷ್ಟಿಷ್ಟಲ್ಲ’ ಎನ್ನುತ್ತಾರೆ ನಂದಕಿಶೋರ್.
ಅದಕ್ಕೆಲ್ಲ ‘ಪೊಗರು’ ಉತ್ತರ ಕೊಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ನಂದಕಿಶೋರ್. ‘ನನ್ನ ಸಿನಿಮಾ ಯಶಸ್ವಿಯಾದಾಗ ಅದು ರಿಮೇಕ್ ಎಂದರು. ನನ್ನ ಮೊದಲ ಚಿತ್ರವೇ ಸ್ವಮೇಕ್ ಆಗಿತ್ತು. ಆದರೂ ಸಿಗಬೇಕಾದ ಮಾನ್ಯತೆ, ಸಂಭಾವನೆ ಯಾವುದೂ ಸಿಕ್ಕಿಲ್ಲ. ಹಾಗಾಗಿ ಎಲ್ಲವೂ ಈ ಚಿತ್ರದ ಮೇಲೆ ನಿಂತಿದೆ. ಭಯದಿಂದ ಎದುರು ನೋಡುತ್ತಿದ್ದೇನೆ’ ಎನ್ನುತ್ತಾರೆ ನಂದಕಿಶೋರ್. ಇದೊಂದು ಮಾಸ್ ಚಿತ್ರ ಎನ್ನುವುದಕ್ಕಿಂತ ಫ್ಯಾಮಿಲಿ ಡ್ರಾಮಾ ಎನ್ನುವ ಅವರು, ‘ಮಾಸ್ ಅಂಶಗಳು ಇದೆ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ, ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರ. ಧ್ರುವ ಅವರ ಸಹಕಾರವಿಲ್ಲದಿದ್ದರೆ ಈ ಚಿತ್ರ ಸಾಧ್ಯವಾಗುತ್ತಿರಲಿಲ್ಲ. ಸಂಪೂರ್ಣವಾಗಿ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಅವರು, ಈ ಚಿತ್ರಕ್ಕಾಗಿ ಮೂರು ವರ್ಷ ಎತ್ತಿಟ್ಟಿದ್ದಾರೆ. ಮೂರು ವರ್ಷದಿಂದ ಧ್ರುವ ಚಿತ್ರ ಬಂದಿಲ್ಲ ಎಂಬ ಅಭಿಮಾನಿಗಳ ಕೊರಗನ್ನು ಈ ಸಿನಿಮಾ ನೀಗಿಸಲಿದೆ’ ಎಂಬುದು ನಂದಕಿಶೋರ್ ಅಭಿಪ್ರಾಯ. ‘ಪೊಗರು’ ಚಿತ್ರದಲ್ಲಿ ಧ್ರುವಗೆ ನಾಯಕಿಯಾಗಿ ರಶ್ಮಿಕಾ ನಟಿಸಿದ್ದು, ಧನಂಜಯ್, ರಾಘವೇಂದ್ರ ರಾಜಕುಮಾರ್, ಪವಿತ್ರಾ ಲೋಕೇಶ್ ತಾರಾಗಣದಲ್ಲಿದ್ದಾರೆ. ಗಂಗಾಧರ್ ನಿರ್ವಿುಸಿರುವ ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ.