

ಕನ್ನಡದ ಜನಪ್ರಿಯ ಗಾಯಕ ಕಂ ಸಂಗೀತ ನಿರ್ದೇಶಕ ವಿಜಯ್‌ಪ್ರಕಾಶ್ ಅವರ ಬಾಳಲ್ಲಿ ಇಂದು ವಿಶೇಷವಾದ ದಿನ ಎಂದರೆ ತಪ್ಪಿಲ್ಲ. ಅವರಿಗೆ ವಿಶೇಷವಾದ ದಿನ ಎನ್ನುವುದಕ್ಕಿಂತ ಇಂದು ‘ವಿಜಯ್‌ಪ್ರಕಾಶ್ ದಿನ’ ಎನ್ನುವುದು ಹೆಚ್ಚು ಸೂಕ್ತ.
ಇದನ್ನೂ ಓದಿ: ಇರ್ಫಾನ್ ನೆನಪಲ್ಲಿ ಹೀಗೊಂದು ಒಳ್ಳೆಯ ಕೆಲಸ …
ಏನಿದು ‘ವಿಜಯ್‌ಪ್ರಕಾಶ್ ದಿನ’ ಎಂಬ ಪ್ರಶ್ನೆ ಬರುವುದು ಸಹಜ. ಅದಕ್ಕೆ ನೀವು ಕಳೆದ ವರ್ಷ ಇದೇ ದಿನವನ್ನು ನೆನಪಿಸಿಕೊಳ್ಳಬೇಕು. ಕಳೆದ ವರ್ಷ ಇದೇ ದಿನದಂದು ವಿಜಯ್‌ಪ್ರಕಾಶ್ ಅವರು ಅಮೆರಿಕಾದ ನಾರ್ಥ್ ಕ್ಯಾರೋಲಿನಾಗೆ ಭೇಟಿ ಕೊಟ್ಟು, ಅಲ್ಲಿ ಕಾರ್ಯಕ್ರಮವೊಂದನ್ನು ನೀಡಿದ್ದರು. ವಿಜಯ್‌ಪ್ರಕಾಶ್ ಅವರ ಮಧುರ ಗಾಯನಕ್ಕೆ ಅಲ್ಲಿನ ಜನತೆ ಮನಸೋತಿತ್ತು. ಆ ನೆನಪಿಗಾಗಿ ಕಾನ್‌ಕಾರ್ಡ್ ಸಿಟಿಯ ಮೇಯರ್ ಆದ ವಿಲಿಯಂ ಸಿ ಡಶ್ ಅವರು, ಮೇ 12ರಂದು ‘ವಿಜಯ್‌ಪ್ರಕಾಶ್ ದಿನ’ ಎಂದು ಘೋಷಿಸಿದ್ದರು. ಅಷ್ಟೇ ಅಲ್ಲ, ಈ ಕುರಿತು ಒಂದು ಸರ್ಟಿಫಿಕೇಟ್ ಸಹ ನೀಡಿದ್ದರು.
ಭಾರತದ ಗಾಯಕರೊಬ್ಬರ ಹೆಸರಿನಲ್ಲಿ ಅಮೆರಿಕಾದಲ್ಲಿ ಒಂದು ದಿನ ಮೀಸಲಿಟ್ಟ ಘಟನೆ ಈ ಹಿಂದೆ ನಡೆದಿರಲಿಲ್ಲ. ಅಂಥದ್ದೊಂದು ಅಪರೂಪದ ಸಾಧನೆಯನ್ನು ವಿಜಯ್‌ಪ್ರಕಾಶ್ ಮಾಡಿದ್ದರು. ಅದಾಗಿ ಒಂದು ವರ್ಷವಾಗಿದೆ.
ಇವತ್ತಿಗೆ ವಿಜಯ್‌ಪ್ರಕಾಶ್ ಅವರಿಗೆ ಆ ಸರ್ಟಿಫಿಕೇಟ್ ಸಿಕ್ಕಿ ಒಂದು ವರ್ಷವಾಗಿದೆ. ಕರೊನಾ ತೀವ್ರತೆಯಿಂದ ಅಮೆರಿಕಾದಲ್ಲಿ ವಿಜಯ್‌ಪ್ರಕಾಶ್ ದಿನವನ್ನು ಇಂದು ಆಚರಿಸಲಾಗುತ್ತದೋ, ಇಲ್ಲವೋ ಗೊತ್ತಿಲ್ಲ. ಆದರೆ, ತಮಗೆ ಪ್ರಮಾಣಪತ್ರ ಸಿಕ್ಕ ಈ ಮಧುರ ನೆನಪನ್ನು ವಿಜಯ್‌ಪ್ರಕಾಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.