ನನ್ನ ಬದುಕು, ನನ್ನ ಮುಖ: ಟ್ರೋಲಿಗರಿಗೆ ಖಡಕ್​ ಉತ್ತರ ಕೊಟ್ಟ ಬಾಲಿವುಡ್​ ನಟಿ ಶೃತಿ ಹಾಸನ್​

shruthi
Published on

ಮುಂಬೈ: ಬಾಲಿವುಡ್​ ನಟಿ ಶೃತಿ ಹಾಸನ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ್ದ ಒಂದು ಪೋಸ್ಟ್​ ಭಾರೀ ಚರ್ಚೆಗೆ ಕಾರಣವಾಗಿತ್ತು. ಟ್ರೋಲಿಗರು ಆ ಪೋಸ್ಟ್​ಗೆ ಮಾಡುತ್ತಿದ್ದ ಕಾಮೆಂಟ್​ಗಳಿಗೆ ಖಡಕ್ಕಾಗಿ ಉತ್ತರಿಸಿರುವ ನಟಿ, ಇದು ನನ್ನ ಬದುಕು, ನನ್ನ ಮುಖ, ನನ್ನಿಷ್ಟ ಎಂದು ಹೇಳಿದ್ದಾರೆ.

ನಿನ್ನೆ ಸಂಜೆ ಶೃತಿ ಹಾಸನ್​ ಹಾಕಿದ್ದ ಫೋಟೋವೊಂದಕ್ಕೆ ಅನೇಕರು "ತುಂಬಾ ತೆಳ್ಳಗಾಗಿದ್ದೀರ", "ವಯಸ್ಸಾದಂತೆ ಕಾಣುತ್ತಿದ್ದೀರ" ಎಂದು ಕಾಮೆಂಟ್​ಗಳನ್ನು ಮಾಡಿದ್ದರು. ಇಂತಹ ಕಾಮೆಂಟ್​ಗಳು ಬರಲಾರಂಭಿಸಿದ ತಕ್ಷಣ ಮತ್ತೊಂದು ಪೋಸ್ಟ್​ನ್ನು ಹಾಕುವ ಮೂಲಕ ನಟಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

ತಾನು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿರುವ ಸತ್ಯವನ್ನು ಬಾಯ್ಬಿಟ್ಟಿರುವ ನಟಿ, ಇದು ನನ್ನ ಬದುಕು, ನನ್ನ ಮುಖ. ನಾನು ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡಿದ್ದೇನೆ. ಅದನ್ನು ಹೇಳಿಕೊಳ್ಳಲು ನನಗೇನು ಹೇಸಿಗೆಯಿಲ್ಲ. ಅದನ್ನು ಪ್ರಚಾರ ಮಾಡಬೇಕೆಂದೇನಿಲ್ಲ. ಹಾಗಂತ ಅದರ ವಿರುದ್ಧವೂ ನಾನಿಲ್ಲ. ಇದು ನಾನು ಇರಲು ಬಯಸುವ ರೀತಿ ಎಂದು ಹೇಳಿಕೊಂಡಿದ್ದಾರೆ.

ಹೆಣ್ಣು ಮಕ್ಕಳ ದೇಹದಲ್ಲಾಗುವ ಹಾರ್ಮೋನ್​ಗಳ ಬದಲಾವಣೆಯ ಕುರಿತು ಹೇಳಿಕೊಂಡಿರುವ ಅವರು ಯಾರಿಗಾದರೂ ಅವರವರ ದೇಹದಲ್ಲಿ ಉಂಟಾಗುವ ಹಾರ್ಮೋನ್​ಗಳ ಬದಲಾವಣೆಗಳು ಅಷ್ಟು ಸುಲಭವಲ್ಲ. ಇಷ್ಟು ವರ್ಷಗಳ ಕಾಲ ನಾನು ನನ್ನ ದೇಹದ ಹಾರ್ಮೋನ್​ಗಳ ಜತೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದೇನೆ. ಅದರ ನೋವು ನನಗಷ್ಟೇ ಗೊತ್ತು ಎಂದು ಹೇಳಿದ್ದಾರೆ.

ನಮಗಾಗಿ ಮತ್ತು ನಮ್ಮ ಸುತ್ತಲಿನವರಿಗಾಗಿ ನಾವು ಮಾಡಬಹುದಾದ ದೊಡ್ಡ ಅನುಕೂಲವೆಂದರೆ ನಮ್ಮ ದೇಹದ ಮತ್ತು ಮನಸ್ಸಿನ ಬದಲಾವಣೆಗಳನ್ನು ಮತ್ತು ಚಲನೆಯನ್ನು ಸ್ವೀಕರಿಸುವುದು. ಅದನ್ನು ಕಲಿಯಿರಿ ಎಂದು ನಟಿ ಟ್ರೋಲ್​ ಮಾಡಿರುವವರಿಗೆ ಪಾಠ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net