

ಬೆಂಗಳೂರು: ‘ದುನಿಯಾ’ ವಿಜಯ್ ಅಭಿನಯ ಮತ್ತು ನಿರ್ದೇಶನದ ‘ಸಲಗ’ ಚಿತ್ರದ ಹೈಲೈಟ್ ಎಂದರೆ ‘ಟಿಣಿಂಗ ಮಿಣಿಂಗ ಟಿಶ್ಯಾ ...’ ಎಂಬ ಹಾಡು. ಗೀತಾ ಸಿದ್ದಿ ಮತ್ತು ಗಿರಿಜಾ ಸಿದ್ದಿ ಹಾಡಿರುವ ಈ ಹಾಡು, ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಕರೆದು ತರುವಲ್ಲಿ ಮುಖ್ಯ ಪಾತ್ರ ವಹಿಸಿದೆ ಎಂದರೆ ತಪ್ಪಿಲ್ಲ.
ಆದರೆ, ಈ ಹಾಡು ನೋಡಬೇಕು ಎಂದು ಆಸೆಯಿಂದ ಚಿತ್ರಮಂದಿರಕ್ಕೆ ಹೋದವರಿಗೆ ನಿರಾಸೆ ಆಗಿದ್ದು ಸುಳ್ಳಲ್ಲ. ಏಕೆಂದರೆ, ಇದೊಂದು ಪ್ರಮೋಷನಲ್ ಹಾಡಾಗಿದ್ದು, ಬರೀ ಪ್ರಚಾರಕ್ಕಾಗಿ ಮಾತ್ರ ಬಳಸಿಕೊಳ್ಳಲಾಗಿತ್ತು. ಹಾಡು ಮಿಸ್ ಆದ ಬೇಸರದಲ್ಲಿದ್ದ ಅಭಿಮಾನಿಗಳು, ‘ಟಿಣಿಂಗ ಮಿಣಿಂಗ ಟಿಶ್ಯಾ ...’ ಹಾಡನ್ನು ಚಿತ್ರದಲ್ಲಿ ಸೇರಿಸುವುದಕ್ಕೆ ಒತ್ತಾಯ ಮಾಡುತ್ತಲೇ ಇದ್ದರು. ಈಗ ಅವರ ಒತ್ತಾಯಕ್ಕೆ ಕೊನೆಗೂ ಫಲ ಸಿಕ್ಕಿದೆ.
ಈ ಹಾಡನ್ನು ಚಿತ್ರದಲ್ಲಿ ಬಳಸಿಕೊಳ್ಳುವುದಕ್ಕೆ ಚಿತ್ರತಂಡ ತೀರ್ಮಾನಿಸಿದ್ದು, ನ.19ರಿಂದ ಹಾಡನ್ನು ಚಿತ್ರದಲ್ಲಿ ನೋಡಬಹುದಾಗಿದೆ ಎಂದು ನಿರ್ವಪಕ ಕೆ.ಪಿ. ಶ್ರೀಕಾಂತ್ ಹೇಳಿದ್ದಾರೆ. ಈ ಹಾಡನ್ನು ದ್ವಿತೀಯಾರ್ಧದಲ್ಲಿ ಸೇರಿಸಿದ್ದೇವೆ. 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಹಾಡನ್ನು ನೋಡಬಹುದು’ ಎನ್ನುತ್ತಾರೆ.