

ಈ ಇಪ್ಪತ್ತು ವರ್ಷಗಳಲ್ಲಿ ನನಗೆ ಯಾವತ್ತೂ ಕಡಿಮೆಯಾಗಿಲ್ಲ. ಪ್ರತಿಭೆ, ಶ್ರಮ ಇವೆರಡರ ಜತೆಗೆ ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿ ನಾನಿದ್ದೆ. ಇಲ್ಲಿ ಪ್ರತಿಭಾವಂತರು ಸಾಕಷ್ಟು ಜನ ಇದ್ದಾರೆ. ಸಮಯ ಮತ್ತು ಅವಕಾಶ ಸಹ ಬಹಳ ಮುಖ್ಯ. ದೇವರು ಇವೆರಡೂ ವಿಷಯಗಳಲ್ಲಿ ನನಗೆ ಯಾವತ್ತೂ ಕಡಿಮೆ ಮಾಡಿಲ್ಲ. ಅವೆರಡೂ ಯಥೇಚ್ಛವಾಗಿ ನನಗೆ ಸಿಕ್ಕಿತು ...’ ಇಷ್ಟು ಹೇಳಿ ಒಮ್ಮೆ ಸ್ಮೈಲ್ ಮಾಡಿದರು ಗಣೇಶ್. ಮಾಧ್ಯಮದವರೆದುರು ಅವರು ಕೂತು ಮಾತನಾಡಿ ಒಂದೂವರೆ ವರ್ಷಗಳಾಗಿದ್ದವು. ಇತ್ತೀಚೆಗೆ ಸಮಾರಂಭವೊಂದಕ್ಕೆ ಮುಖ್ಯ ಅತಿಥಿಯಾಗಿ ಅವರು ಬಂದಿದ್ದರು. ಈ ಸಂದರ್ಭದಲ್ಲಿ ಲೋಕಾಭಿರಾಮವಾಗಿ ಮಾತನಾಡಿದ ಗಣೇಶ್, ಹಲವು ವಿಷಯಗಳನ್ನು ಹಂಚಿಕೊಂಡರು.
ಮಾತು ಪ್ರಾರಂಭವಾಗಿದ್ದು, ಲಾಕ್ಡೌನ್ ಸಮಯದಲ್ಲಿ ಅವರು ಮಾಡಿದ ಉಪಕಾರಗಳ ಬಗ್ಗೆ. ಅದನ್ನೆಲ್ಲ ಹೇಳಿಕೊಳ್ಳಬಾರದು ಎನ್ನುವ ಗಣೇಶ್, ‘ಸಾಕಷ್ಟು ಕೆಲಸಗಳಾಗುತ್ತಿರುತ್ತವೆ. ನನ್ನ ಕೈಲಾಗಿದ್ದು ಮಾಡುತ್ತಿರುತ್ತೇನೆ. ಏಕೆಂದರೆ, ನಾನು ಜೀರೋದಿಂದ ಬಂದವನು. ಬಾಡಿಗೆ ಕಟ್ಟಲೂ ಒಂದು ಹಂತದಲ್ಲಿ ಕಷ್ಟವಿತ್ತು. ಈಗ ಸ್ವಲ್ಪ ಅನುಕೂಲವಿದೆ, ಕೈಲಾಗಿದ್ದನ್ನು ಮಾಡುತ್ತಿದ್ದೇನೆ’ ಎನ್ನುತ್ತಾರೆ.
ತಮ್ಮ ಮುಂದಿನ ಚಿತ್ರಗಳ ಬಗ್ಗೆಯೂ ಹೇಳಿಕೊಳ್ಳುತ್ತ, ‘ಸದ್ಯ ಮೂರು ಚಿತ್ರಗಳಿವೆ. ‘ಸಖತ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ‘ತ್ರಿಬಲ್ ರೈಡಿಂಗ್’ ಹಾಡುಗಳ ಚಿತ್ರೀಕರಣ ಬಾಕಿ ಇದೆ. ‘ಗಾಳಿಪಟ 2’ ಸಹ ಮುಗಿಯುವ ಹಂತದಲ್ಲಿದೆ. ಈ ಪೈಕಿ ‘ತ್ರಿಬಲ್ ರೈಡಿಂಗ್’ ಮೊದಲು ಬಿಡುಗಡೆಯಾಗಲಿದೆ’ ಎನ್ನುತ್ತಾರೆ ಗಣೇಶ್.
‘ಗಾಳಿಪಟ 2’ ಚಿತ್ರವು ಯೋಗರಾಜ್ ಭಟ್ ಹಾಗೂ ತಮ್ಮ ಬೆಸ್ಟ್ ಚಿತ್ರ ಆಗಲಿದೆ ಎಂದು ಭವಿಷ್ಯ ನುಡಿಯುವ ಗಣೇಶ್, ‘ನಮ್ಮಿಬ್ಬರ ಕಾಂಬಿನೇಷನ್ನ ಚಿತ್ರಗಳು ಸಾಕಷ್ಟು ಯಶಸ್ವಿಯಾಗಿವೆ. ಆದರೆ, ‘ಗಾಳಿಪಟ 2’ ಬೆಸ್ಟ್ ಚಿತ್ರವಾಗಲಿದೆ. ಸಂಭಾಷಣೆ ಇರಬಹುದು, ಚಿತ್ರಕಥೆ ಆಗಿರಬಹುದು ... ಬಹಳ ಚೆನ್ನಾಗಿ ಮೂಡಿಬಂದಿದೆ. ರೀಡಿಂಗ್ ಕೇಳುತ್ತಿದ್ದಂತೆಯೇ, ಬಹಳ ಬದಲಾಗಿಬಿಟ್ಟಿದ್ದೀರಿ ಎಂದು ಹೇಳಿದೆ. ಇದು ಇವತ್ತಿನ ಸ್ನೇಹ, ಸೆಂಟಿಮೆಂಟ್ನ ಕುರಿತಾದ ಚಿತ್ರ’ ಎಂದು ಅವರು ಖುಷಿಯಾಗುತ್ತಾರೆ. ಇನ್ನು, ‘ಸ್ಟೋರಿ ಆಫ್ ರಾಯಗಡ’ ಕುರಿತು ಮಾತನಾಡುವ ಅವರು, ‘ಚಿತ್ರ ಬಹಳ ರಾ ಆಗಿರುತ್ತದೆ, ವಿಭಿನ್ನವಾಗಿರುತ್ತದೆ ಎಂದು ಸುನಿ ಹೇಳಿದಾಗ, ಒಂದು ಮಾತು ಹೇಳಿದೆ. ಏನೇ ಮಾಡು, ಕಾಮಿಡಿ ಮತ್ತು ಎಮೋಷನ್ ಮಾತ್ರ ಬಿಡಬೇಡ ಎಂದೆ. ಏಕೆಂದರೆ, ಅದು ನಮ್ಮಿಬ್ಬರ ಟ್ರಂಪ್ ಕಾರ್ಡ್. ನಮ್ಮಿಬ್ಬರ ಶೈಲಿಯನ್ನು ತಲೆಯಲ್ಲಿಟ್ಟುಕೊಂಡು ಕಥೆ ಮಾಡು ಎಂದು ಹೇಳಿದಾಗ ರೂಪುಗೊಂಡ ಕಥೆ ಅದು. ಇದುವರೆಗೂ ನಾನು ಮಾಡದಿರುವ ಒಂದು ಪಾತ್ರ ಅದು. ಈಗ ಸಿಕ್ಕಿದೆ’ ಎನ್ನುತ್ತಾರೆ.