

ಬೆಂಗಳೂರು: ಒಂದೇ ಒಂದು ಹಾಡು ಬಾಕಿ ಇತ್ತು. ಮಿಕ್ಕಂತೆ ರವಿಚಂದ್ರನ್ ಅವರ ಮಗ ವಿಕ್ರಮ್ ಅಭಿನಯದ ‘ತ್ರಿವಿಕ್ರಮ’ ಚಿತ್ರೀಕರಣ ಮುಗಿದಿತ್ತು. ಈಗ ಬಾಕಿ ಇದ್ದ ಹಾಡಿನ ಚಿತ್ರೀಕರಣ ಸಹ ಮುಕ್ತಾಯವಾಗಿದ್ದು, ಕುಂಬಳಕಾಯಿ ಒಡೆಯಲಾಗಿದೆ. ಇನ್ನು, ಚಿತ್ರ ಬಿಡುಗಡೆಯೊಂದೇ ಬಾಕಿ. ಆ ದಿನಾಂಕವೂ ನಿಗದಿಯಾಗಿದ್ದು, ಜೂನ್ 24ಕ್ಕೆ ಚಿತ್ರವು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಇತ್ತೀಚೆಗಷ್ಟೇ ಮುಗಿದಿರುವ ಹಾಡಿನ ಬಗ್ಗೆ ಹೇಳುವುದಾದರೆ, ಈ ಹಾಡನ್ನು ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ನಿರ್ವಿುಸಲಾಗಿದ್ದ ವಿಶೇಷ ಸೆಟ್ನಲ್ಲಿ ಚಿತ್ರೀಕರಿಸಲಾಗಿದೆ. ಯೋಗರಾಜ್ ಭಟ್ ಬರೆದಿರುವ ‘ಶಕುಂತಲಾ ಶೇಕ್ ಎ ಬಾಡಿ ಪ್ಲೀಸ್ ...’ ಎಂಬ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಭೂಷಣ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ವಿಕ್ಕಿ ಮತ್ತು ನಾಯಕಿ ಆಕಾಂಕ್ಷಾ ಶರ್ಮ ಹೆಜ್ಜೆ ಹಾಕಿದ್ದಾರೆ. ಅವರಿಬ್ಬರ ಜತೆಗೆ ಹಲವು ಡ್ಯಾನ್ಸರ್ಗಳು ಸಹ ಭಾಗಿಯಾಗಿದ್ದಾರೆ.
‘ತ್ರಿವಿಕ್ರಮ್ ಎರಡು ವರ್ಷಗಳ ಹಿಂದೆಯೇ ಮುಗಿದಿತ್ತು. ಆದರೆ, ಕರೊನಾ ಇದ್ದುದರಿಂದ ಚಿತ್ರ ಬಿಡುಗಡೆಯಾಗಿರಲಿಲ್ಲ. ಈ ಚಿತ್ರವನ್ನು ಸಹನಾ ಮೂರ್ತಿ ನಿರ್ವಿುಸಿದ್ದು, ರಾಮ್ಕೋ ಸೋಮಣ್ಣ ನಿರ್ವಿುಸಿದ್ದಾರೆ. ವಿಕ್ರಮ್ ಆಕಾಂಕ್ಷಾ ಶರ್ಮ ಅಲ್ಲದೆ ತುಳಸಿ ಶಿವಮಣಿ, ಆದಿ ಲೋಕೇಶ್, ಚಿಕ್ಕಣ್ಣ, ಸಾಧು ಕೋಕಿಲ, ರೋಹಿತ್ ರಾಯ್ ಮುಂತಾದವರು ನಟಿಸಿದ್ದಾರೆ.