

ಬೆಂಗಳೂರು: ‘ನಾನು ರವಿಚಂದ್ರನ್ ಅವರ ಮಗ, ಮನೋರಂಜನ್ ಅವರ ಸಹೋದರ ಇರಬಹುದು. ಆದರೆ, ಪ್ರೇಕ್ಷಕರಿಗೆ ಒಬ್ಬ ಹೊಸ ನಟ ಅಷ್ಟೇ. ಈ ಸಿನಿಮಾದಲ್ಲಿ ಆ ತರಹ ಮಾಡಿದ್ದೇನೆ, ಈ ತರಹ ಮಾಡಿದ್ದೇನೆ ಎಂದು ಹೇಳುವುದಿಲ್ಲ. ಇದು ನಿಮ್ಮ ಕಥೆ. ಪಕ್ಕಾ ಮಧ್ಯಮ ವರ್ಗದ ಹುಡುಗನ ಕಥೆ. ನೀವು ನೋಡಬಹುದು ಅಂತ ಪ್ರಾಮಿಸ್ ಮಾಡುತ್ತೇನೆ ...’ ಹೀಗೆ ಹೇಳಿದ್ದು ವಿಕ್ರಮ್ ರವಿಚಂದ್ರನ್ ಅವರ ಮಗ ವಿಕ್ರಮ್ ಅಭಿನಯದ ಮೊದಲ ಚಿತ್ರ ‘ತ್ರಿವಿಕ್ರಮ’, ಕೋವಿಡ್ಗಿಂತ ಮುನ್ನವೇ ಶುರುವಾಗಿತ್ತು. ಕಾರಣಾಂತರಗಳಿಂದ ತಡವಾಗಿ, ಜೂನ್ 24ಕ್ಕೆ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆ ಆಗುತ್ತಿರುವ ವಿಷಯ ಹಂಚಿಕೊಳ್ಳುವುದಕ್ಕೆ ಚಿತ್ರತಂಡದವರು ಬಂದಿದ್ದರು.
ಈ ಸಂದರ್ಭದಲ್ಲಿ ಪುನೀತ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದೇ ಮಾತು ಶುರು ಮಾಡಿದ ವಿಕ್ರಮ್ ‘ಚಿತ್ರದ ಕಥೆ ಗೊತ್ತಿರುವುದು ಶಿವಣ್ಣ ಮತ್ತು ಪುನೀತ್ ಅವರಿಗೆ ಮಾತ್ರ. ನಾನು ಈ ಚಿತ್ರ ಮಾಡುತ್ತಿದ್ದೇನೆ ಎಂದು ಅವರಿಗೆ ಹೇಳಿದಾಗ, ಕಥೆ ಏನು ಎಂದು ಕೇಳಿದರು. ಈ ಚಿತ್ರದಲ್ಲಿ ಒಂದು ಹಾಡು ಹಾಡುತ್ತೇನೆ, ನೀನು ಚೆನ್ನಾಗಿ ಡ್ಯಾನ್ಸ್ ಮಾಡಬೇಕು ಎಂದಿದ್ದರು. ಚೆನ್ನಾಗಿ ಡ್ಯಾನ್ಸ್ ಮಾಡಲಿಲ್ಲ ಎಂದರೆ ಹೊಡೆಯುತ್ತೇನೆ ಎಂದು ಪ್ರೀತಿಯಿಂದ ಹೇಳಿದ್ದರು. ಈ ಚಿತ್ರಕ್ಕೆ ಅಪು್ಪ ಸಾರ್ ಒಂದು ಹಾಡು ಹಾಡಬೇಕಿತ್ತು. ಅದನ್ನು ಶೂಟ್ ಮಾಡಿಲ್ಲ. ಅವರು ತುಂಬಾ ಇಷ್ಟಪಟ್ಟಿದ್ದರಿಂದ ಪ್ರಮೋಷನಲ್ ಹಾಡಾಗಿ ಬಳಸಿಕೊಳ್ಳುವ ಯೋಚನೆ ಇದೆ’ ಎಂದರು. ಸಮಾರಂಭಕ್ಕೆ
ಮುಖ್ಯ ಅತಿಥಿಯಾಗಿ ಬಂದಿದ್ದ ತಾರಾ, ವಿಕ್ರಮ್ ಮತ್ತು ಚಿತ್ರತಂಡಕ್ಕೆ ಹಾರೈಸಿದರು. ಜತೆಗೆ ರವಿಚಂದ್ರನ್ ಅವರ ಮೇಲೆ ಸಣ್ಣ ಮುನಿಸಿದೆ ಎಂದು ಹೇಳಿಕೊಂಡರು. ‘ರವಿಚಂದ್ರನ್ ಅವರು ಇಡೀ ದೇಶ ತಿರುಗುವಂತಹ ಸಿನಿಮಾ ಮಾಡಿದರು. ಆದರೆ, ಯಾವತ್ತೂ ಅವರು ತಮ್ಮ ಮಕ್ಕಳ ಹಿಂದೆ ನಿಂತಿಲ್ಲ. ಅವರು ನಿರ್ದೇಶನ ಮಾಡಿ, ಮಕ್ಕಳನ್ನು ಇನ್ನಷ್ಟು ಶ್ರೀಮಂತವಾಗಿ ತೋರಿಸಬೇಕು ಎನ್ನುವ ಆಸೆ ನನಗಿದೆ’ ಎಂದರು ತಾರಾ.
‘ಕೆಜಿಎಫ್ 2’ ಮೂಡ್ನಿಂದ ಹೊರಬನ್ನಿ: ಈ ಸಂದರ್ಭದಲ್ಲಿ ಮಾತನಾಡಿದ ಸಾಧು ಕೋಕಿಲ, ‘ಜನುಮದ ಜೋಡಿ’ ಬಿಡುಗಡೆಯಾದ ಮೇಲೆ, ಕೆಲವು ಸಮಯ ಜನ ಹೊಸ ಚಿತ್ರವನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಅದೇ ಗುಂಗಿನಲ್ಲಿದ್ದರು. ‘ಯಜಮಾನ’ ಬಿಡುಗಡೆಯಾದ ನಂತರ ‘ದಿಗ್ಗಜರು’ ಬಂತು. ‘ಯಜಮಾನ’ ಯಶಸ್ವಿಯಾಗಿ, ‘ದಿಗ್ಗಜರು’ ಚೆನ್ನಾಗಿದ್ದರೂ ಹಿಟ್ ಆಗಲಿಲ್ಲ. ‘ಕೆಜಿಎಫ್ 2’ ಬಂದ ಮೇಲೆ, ಜನ ಇನ್ನೂ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಆ ಚಿತ್ರದ ಗುಂಗಿನಿಂದ ಹೊರಬಂದಿಲ್ಲ. ಆದಷ್ಟು ಬೇಗ ಹೊರಬರಲಿ’ ಎನ್ನುತ್ತಾರೆ ಸಾಧು.