

ಚೆನ್ನೈ: ಹೊಂಗನಸು ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಆಗಮಿಸಿ, ಅದಾದ ಬಳಿಕ ಪುನೀತ್ ರಾಜಕುಮಾರ್ ಜತೆಗೆ ‘ರಣವಿಕ್ರಮ’ ಹಾಗೂ ಶಿವರಾಜ್ಕುಮಾರ್ ಅಭಿನಯದ ಬೈರಾಗಿ ಸಿನಿಮಾದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿರುವ ಬಹುಭಾಷಾ ನಟಿ ಅಂಜಲಿ ಸದ್ಯ ತಮಿಳು, ತೆಲುಗಿನಲ್ಲಿ ಬಿಜಿಯಾಗಿದ್ದಾರೆ.
ಟಾಲಿವುಡ್ ಇಂಡಸ್ಟ್ರಿಯಲ್ಲಿ ಸಾಲು ಸಾಲು ಆಫರ್‌ಗಳಿಂದ ಬ್ಯುಸಿಯಾಗಿರುವ ನಾಯಕಿಯರಲ್ಲಿ ಅಂಜಲಿ ಕೂಡ ಒಬ್ಬರು. ರಾಮ್ಚರಣ್ ಅಭಿನಯದ ಮತ್ತು ಶಂಕರ್ ನಿರ್ದೇಶನದ ಗೇಮ್ ಚೇಂಜರ್ ಚಿತ್ರದಲ್ಲಿ ಅಂಜಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ಈ ಸಿನಿಮಾ ಈ ವರ್ಷ ಕ್ರಿಸ್‌ಮಸ್ ಹಬ್ಬಕ್ಕೆ ಉಡುಗೊರೆಯಾಗಿ ಬಿಡುಗಡೆಯಾಗಲಿದೆ.
ಅಂಜಲಿ ಅವರು ವೆಬ್ ಸರಣಿ ಕಡೆಯು ಗಮನಹರಿಸಿದ್ದು, ಅವರು ನಟಿಸಿರುವ ಬಹಿಷ್ಕರಣ ವೆಬ್ ಸರಣಿ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಸರಣಿಯಲ್ಲಿ ಅಂಜಲಿ ಅವರು ವೇಶ್ಯೆಯ ಪಾತ್ರದಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಂಜಲಿ ಅಭಿನಯಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅಂಜಲಿ, ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ನನ್ನ ವೃತ್ತಿ ಜೀವನದ ಆರಂಭದಿಂದಲೂ ನನಗೆ ಒಳ್ಳೆಯ ಪಾತ್ರಗಳು ಸಿಕ್ಕಿವೆ. ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇರುವ ಪ್ರಾಜೆಕ್ಟ್ಗಳನ್ನೇ ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಕೆಲವು ಚಿತ್ರಗಳಿಗೆ ಮಾರ್ಷಲ್ ಆರ್ಟ್ಸ್ ಕಲಿತಿದ್ದೇನೆ. ಸಾಹಸ ದೃಶ್ಯಗಳನ್ನು ಡ್ಯೂಪ್ ಇಲ್ಲದೆ ಮಾಡುತ್ತೇನೆ. ನವರಸ ವೆಬ್ ಸರಣಿ ಶೂಟಿಂಗ್ ಸಮಯದಲ್ಲಿ ನನ್ನ ವೇಷಭೂಷಣದಿಂದಾಗಿ ಕೆಲವು ಗಂಟೆಗಳ ಕಾಲ ವಾಶ್ ರೂಮ್‌ಗೆ ಹೋಗಲು ಕೂಡ ಸಾಧ್ಯವಾಗಲಿಲ್ಲ ಎಂದು ಅಂಜಲಿ ಹೇಳಿದರು.
ಈ ಬಹಿಷ್ಕರಣ ವೆಬ್ ಸರಣಿಯಲ್ಲಿ ನಾನು ಕೆಲ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿ ಗೊಂದಲಕ್ಕೀಡಾಗಿದ್ದೇನೆ. ಆದರೆ, ಆ ದೃಶ್ಯಗಳನ್ನು ಚಿತ್ರೀಕರಿಸುವಾಗ, ಎಲ್ಲರನ್ನೂ ಹೊರಗೆ ಕಳುಹಿಸಿ ಶೂಟ್ ಮಾಡಲಾಗಿದೆ ಎಂದು ಅವರು ಬಹಿರಂಗಪಡಿಸಿದರು. ನಾನು ಇಲ್ಲಿಯವರೆಗೆ ಈ ರೀತಿ ಬೋಲ್ಡ್ ಆಗಿ ಮಾಡಿಲ್ಲ ಮತ್ತು ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ನಿರೀಕ್ಷೆಗಿಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಅಂಜಲಿ ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಹರಿದಾಡುವ ನೆಗೆಟಿವ್ ಸುದ್ದಿಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅದನ್ನು ಓದಿದಾಗ ಬೇಸರವಾಗುತ್ತದೆ. ಆದರೆ, ನಂತರ ಅದನ್ನು ಮರೆತುಬಿಡುತ್ತೇನೆ ಎಂದು ಅಂಜಲಿ ಇದೇ ಸಂದರ್ಭದಲ್ಲಿ ಹೇಳಿದರು. ತನ್ನ ಮದುವೆಯ ವದಂತಿಗಳಿಗೆ ಗಮನ ಕೊಡುವುದಿಲ್ಲ, ಸಮಯ ಬಂದಾಗ ಮದುವೆಯಾಗುತ್ತೇನೆ ಎಂದು ಕ್ಲಾರಿಟಿ ನೀಡಿದರು. (ಏಜೆನ್ಸೀಸ್)