

ಬೆಂಗಳೂರು: ನಟ ವಿಜಯ್ ಸೂರ್ಯ ಇದೀಗ ಸಾಫ್ಟ್ವೇರ್ ಉದ್ಯೋಗಿಯಾಗಿದ್ದಾರೆ. ಹಾಗಂತ ಅವರೇನೂ ಯಾವುದೇ ಸಾಫ್ಟ್ವೇರ್ ಕಂಪನಿಯ ಉದ್ಯೋಗಕ್ಕೆ ಸೇರಿಲ್ಲ. ಬದಲಿಗೆ, ಸಾಫ್ಟ್ವೇರ್ ಉದ್ಯೋಗಿಗಳ ಬದುಕನ್ನು ಅನಾವರಣಗೊಳಿಸುವಂಥ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅಂದರೆ, ಟೆಕ್ಕಿಯ ಪಾತ್ರದಲ್ಲಿ ಹೊಸ ಸಿನಿಮಾವೊಂದರಲ್ಲಿ ನಟಿಸಿರುವ ಅವರು, ಆ ಮೂಲಕ ಸಾಫ್ಟ್ವೇರ್ ಉದ್ಯೋಗಿಗಳ ಜೀವನವನ್ನು ತೆರೆಯ ಮೇಲೆ ತರಲಿದ್ದಾರೆ. ಟೆಕ್ಕಿಗಳ ಕುರಿತಾದ ಈ ಸಿನಿಮಾದ ನಿರ್ದೇಶಕ ಚೇತನ್ ಶೆಟ್ಟಿ ಹಾಗೂ ಛಾಯಾಗ್ರಾಹಕ ಪ್ರಶಾಂತ್ ಇಬ್ಬರೂ ಟೆಕ್ಕಿಗಳೇ ಎಂಬುದಷ್ಟೇ ಅಲ್ಲ, ಚಿತ್ರದಲ್ಲಿನ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಕೂಡ ಸಾಫ್ಟ್ವೇರ್ ಉದ್ಯೋಗಿಗಳೇ ಎನ್ನುವುದು ಈ ಚಿತ್ರದ ವಿಶೇಷ. ಈ ಚಿತ್ರದ ಮೂಲಕ ಸಾಫ್ಟ್ವೇರ್ ಉದ್ಯೋಗಿ, ಕರಾವಳಿ ಮೂಲದ ಚೇತನ್ ಶೆಟ್ಟಿ ನಿರ್ದೇಶಕರಾಗಿ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದ್ದಾರೆ. ಆಕ್ಷನ್-ಕಟ್ ಹೇಳುವ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿರುವ ಚೇತನ್, ಗೆಳೆಯರೊಂದಿಗೆ ಸೇರಿ ನಿರ್ವಪಕರಲ್ಲೊಬ್ಬರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.
‘ಇದು ಮುಖ್ಯವಾಗಿ ಸಾಫ್ಟ್ವೇರ್ ಉದ್ಯೋಗಿಗಳ ಕಥೆ. ಟೆಕ್ಕಿಯೊಬ್ಬನೇ ಕಥಾನಾಯಕ ಆಗಿರುವ ಈ ಕಥೆಯಲ್ಲಿ ಒಬ್ಬ ಸಾಫ್ಟ್ವೇರ್ ಉದ್ಯೋಗಿಯ ಜೀವನದಲ್ಲಿ ಕೆಲವೇ ವರ್ಷಗಳಲ್ಲಿ ಏನೇನಾಗಿ ಬಿಡುತ್ತದೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಇಲ್ಲಿ ನನ್ನ ಅನುಭವವೂ ಸೇರಿ ಸಹೋದ್ಯೋಗಿ, ಸ್ನೇಹಿತ ವಲಯದಲ್ಲಿರುವ ಇತರ ಟೆಕ್ಕಿಗಳ ಜೀವನದಲ್ಲಿನ ಅಂಶಗಳೂ ಇವೆ’ ಎನ್ನುತ್ತ ಚಿತ್ರದ ಕಥಾಹಂದರದ ಬಗ್ಗೆ ಹೇಳಿಕೊಂಡರು ನಿರ್ದೇಶಕರು. ‘ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ನನಗೆ ಮೊದಲಿನಿಂದಲೂ ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಇತ್ತು. ಸೈಕಲಾಜಿಕಲ್ ಥ್ರಿಲ್ಲರ್ ನನ್ನ ಇಷ್ಟದ ಜಾನರ್. ಆದರೆ ಅಂಥ ಸಿನಿಮಾಗಳು ಸಾಕಷ್ಟು ಬಂದು ಹೋಗಿರುವುದರಿಂದ, ಈ ವಿಷಯ ಕೈಗೆತ್ತಿಕೊಂಡೆ. ಇದರಲ್ಲಿ ಹೀರೋ ಆಗಿ ವಿಜಯ್ ಸೂರ್ಯ ಅಭಿನಯಿಸಿದ್ದಾರೆ. ಅವರಿಗೆ ಜತೆಯಾಗಿ ರಂಗಭೂಮಿ ಕಲಾವಿದೆ ಶ್ವೇತಾ ನಟಿಸಿದ್ದಾರೆ. ಈ ಮೂಲಕ ಅವರು ನಾಯಕಿಯಾಗಿ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ. ಇವರು ಟೆಕ್ಕಿ ಅಲ್ಲದಿದ್ದರೂ ಇಂಜಿನಿಯರಿಂಗ್ ಪದವೀಧರೆ. ಇನ್ನೊಂದು ಪ್ರಮುಖ ಪಾತ್ರದಲ್ಲಿ ಪೃಥ್ವಿರಾಜ್ ಅಭಿನಯಿಸಿದ್ದಾರೆ. ಉಳಿದಂತೆ ಅರ್ಧಕ್ಕರ್ಧ ಪಾತ್ರವರ್ಗ ಸಾಫ್ಟ್ವೇರ್ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಿಗಳೇ ಆಗಿದ್ದಾರೆ’ ಎಂಬ ವಿವರ ನೀಡಿದರು ಚೇತನ್. ಮುಕ್ಕಾಲು ಭಾಗ ಚಿತ್ರೀಕರಣ ಐಟಿ ಕ್ಯಾಂಪಸ್ ಒಳಗೇ ನಡೆದಿದ್ದು, ಸದ್ಯ ಶೇ. 65 ಶೂಟಿಂಗ್ ಮುಗಿದಿದೆ. ಇನ್ನು 8-10 ದಿನಗಳಲ್ಲಿ ಶೂಟಿಂಗ್ ಮುಗಿಸುವ ಗುರಿ ಇರಿಸಿಕೊಂಡಿದೆ ಚಿತ್ರತಂಡ.
ಹಿಂದೆ ಖಾಸಗಿ ಬ್ಯಾಂಕ್ನ ಉದ್ಯೋಗದಲ್ಲಿದ್ದೆ. ಬಳಿಕ ಸಾಫ್ಟ್ವೇರ್ ಕ್ಷೇತ್ರಕ್ಕೆ ಬಂದೆ. ಸುಮಾರು ಹತ್ತು ವರ್ಷಗಳ ವೃತ್ತಿ ಅನುಭವದ ಮೇರೆಗೆ ಇಂಥದ್ದೊಂದು ಕಥೆ ಹೆಣೆದಿದ್ದೇನೆ. ಇದು ಎಲ್ಲ ಟೆಕ್ಕಿಗಳಿಗೂ ರಿಲೇಟ್ ಆಗುವಂಥ ಕಥೆ. 2-3 ಟೈಟಲ್ಗಳನ್ನು ಯೋಚನೆ ಮಾಡಿಟ್ಟುಕೊಳ್ಳಲಾಗಿದ್ದು, ಸದ್ಯವೇ ಅದರಲ್ಲೊಂದನ್ನು ಅಂತಿಮಗೊಳಿಸಲಾಗುವುದು. | ಚೇತನ್ ಶೆಟ್ಟಿ ನಿರ್ದೇಶಕ