

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಹೇಮಂತ್ ರಾವ್ ನಿರ್ದೇಶನದ ರಕ್ಷಿತ್ ಶೆಟ್ಟಿ ನಾಯಕನಾಗಿರುವ ‘ಸಪ್ತ ಸಾಗರದಾಚೆ ಎಲ್ಲೋ : ಸೈಡ್ ಎ’ ಕಳೆದ ಸೆ. 1ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಅದಾಗಿ ಮೂರು ವಾರಗಳ ನಂತರ ‘ಸಪ್ತ ಸಾಗರಲು ದಾಟಿ’ ಶೀರ್ಷಿಕೆಯಲ್ಲಿ ಸೆ. 22ರಂದು ತೆಲುಗಿನಲ್ಲೂ ತೆರೆಗೆ ಬಂದಿತ್ತು. ರೊಮ್ಯಾಂಟಿಕ್ ಡ್ರಾಮಾ ಆದ ಕಾರಣ ಕೊಂಚ ನಿಧಾನಗತಿಯ ಚಿತ್ರ ಎಂಬುದನ್ನು ಬಿಟ್ಟರೆ, ಉಳಿದೆಲ್ಲ ವಿಷಯಗಳಲ್ಲಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ರಕ್ಷಿತ್ ಶೆಟ್ಟಿ, ನಾಯಕಿ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್, ಅವಿನಾಶ್, ರಮೇಶ್ ಇಂದಿರ, ಶರತ್ ಲೋಹಿತಾಶ್ವ ಸೇರಿ ಎಲ್ಲರ ನಟನೆ, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಸೇರಿ ತಾಂತ್ರಿಕವಾಗಿಯೂ ಸದ್ದು ಮಾಡಿದ ಚಿತ್ರ ‘ಸಪ್ತ ಸಾಗರದಾಚೆ ಎಲ್ಲೋ : ಸೈಡ್ ಎ’.
ಮೊದಲ ಭಾಗದ ರಿಲೀಸ್ ಡೇಟ್ ಘೋಷಣೆ ಮಾಡಿದಾಗಲೇ ಚಿತ್ರತಂಡ ಸೀಕ್ವಲ್ ಬಿಡುಗಡೆ ದಿನಾಂಕವನ್ನೂ ಅನೌನ್ಸ್ ಮಾಡಿತ್ತು. ಸೆ. 1ರಂದು ‘ಸೈಡ್ ಎ’ ರಿಲೀಸ್ ಆದ 50 ದಿನಗಳಲ್ಲಿ ಅರ್ಥಾತ್ ಅ. 20ರಂದು ‘ಸೈಡ್ ಬಿ’ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿತ್ತು. ಇದೀಗ ಒಂದು ವಾರ ಚಿತ್ರವನ್ನು ಮುಂದೂಡಲಾಗಿದೆ. ಅ. 20ರ ಬದಲಾಗಿ ‘ಸಪ್ತ ಸಾಗರದಾಚೆ ಎಲ್ಲೋ : ಸೈಡ್ ಬಿ’ ಅ. 27ರಂದು ರಿಲೀಸ್ ಆಗಲಿದೆ. ವಿಶೇಷ ಅಂದರೆ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ‘ಸೈಡ್ ಬಿ’ ತೆರೆಗೆ ಬರಲಿದೆ.
ಇದನ್ನೂ ಓದಿ : ‘ಸಲಾರ್’ ಹೀರೋ ಕೈಯಲ್ಲಿವೆ ಎರಡು ಹೊಸ ಪ್ರಾಜೆಕ್ಟ್ಗಳು!
ಒಟಿಟಿಯಲ್ಲಿ ಬಿಡುಗಡೆಯಾದ ‘ಸೈಡ್ ಎ’
ಕನ್ನಡದಲ್ಲಿ ರಿಲೀಸ್ ಆದ 28 ದಿನಗಳ ಬಳಿಕ ಹಾಗೂ ತೆಲುಗಿನಲ್ಲಿ ತೆರೆಗೆ ಬಂದ ಕೇವಲ ಒಂದೇ ವಾರದಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ: ಸೈಡ್ ಎ’ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಕನ್ನಡ ಮತ್ತು ತೆಲುಗು ಮಾತ್ರವಲ್ಲ ಜತೆಗೆ ತಮಿಳು, ಹಿಂದಿ ಹಾಗೂ ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ.