ಆ ಕ್ಷಣದಲ್ಲೇ ನನ್ನ ಹಿಡಿತ ತಪ್ಪಿತು...ಪೊಲೀಸರ ಮುಂದೆ ದಾಳಿಕೋರನ ಕ್ರೌರ್ಯವನ್ನು ಇಂಚಿಂಚೂ ಬಿಚ್ಚಿಟ್ಟ ಸೈಫ್​! Saif Ali Khan

Saif Ali Khan
Published on

Saif Ali Khan : ಬಾಲಿವುಡ್ ಸ್ಟಾರ್ ಹೀರೋ ಸೈಫ್ ಅಲಿ ಖಾನ್ ತಮ್ಮ ಮೇಲೆ ನಡೆದ ಚಾಕು ದಾಳಿಯ ಬಗ್ಗೆ ಮುಂಬೈ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ, ಪೊಲೀಸರು ಬಾಂದ್ರಾದಲ್ಲಿರುವ ಸೈಫ್ ನಿವಾಸಕ್ಕೆ ಹೋಗಿ ಘಟನೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಿದ್ದಾರೆ. ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಹಲ್ಲೆಕೋರ ತನ್ನ ಮೇಲೆ ಹೇಗೆ ದಾಳಿ ಮಾಡಿದ ಮತ್ತು ತಾನು ಹೇಗೆ ಪ್ರತಿದಾಳಿ ನಡೆಸಿದೆ ಎಂಬುದನ್ನು ಸೈಫ್ ವಿವರಿಸಿದ್ದಾರೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಸೈಫ್ ಅಲಿ ಖಾನ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ, ನಾನು ಮತ್ತು ನನ್ನ ಪತ್ನಿ ಕರೀನಾ ಕಪೂರ್ ಖಾನ್ 11ನೇ ಮಹಡಿಯಲ್ಲಿರುವ ಬೆಡ್​ರೂಮ್​ನಲ್ಲಿದ್ದೆವು. ಆ ಸಮಯದಲ್ಲಿ ನಮ್ಮ ಮನೆಗೆಲಸದಾಕೆ ಎಲಿಯಾಮಾ ಫಿಲಿಪ್ ಜೋರಾಗಿ ಕಿರುಚಿದರು. ಹಲ್ಲೆಕೋರ (ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್) ನನ್ನ ಕಿರಿಯ ಮಗ ಜಹಾಂಗೀರ್ (ಜೆಹ್) ಮಲಗಿದ್ದ ಕೋಣೆಗೆ ಪ್ರವೇಶಿಸಿದ್ದ. ಜೆಹ್‌ ಕುತ್ತಿಗೆಗೆ ಚಾಕು ಹಿಡಿದು, ಫಿಲಿಪ್‌ ಬಳಿ ಒಂದು ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟನು.

ದಾಳಿಕೋರನು ಚಾಕುವಿನಿಂದ ಜೆಹ್‌ಗೆ ಬೆದರಿಕೆ ಹಾಕಿದಾಗ ಅವನು ಅಳಲು ಪ್ರಾರಂಭಿಸಿದನು. ತಕ್ಷಣ, ಫಿಲಿಪ್ ದಾಳಿಕೋರನಿಂದ ಜೆಹ್‌ನನ್ನು ರಕ್ಷಿಸಲು ಪ್ರಯತ್ನಿಸಿದಳು. ಈ ಪ್ರಕ್ರಿಯೆಯಲ್ಲಿ ದಾಳಿಕೋರನು ಚಾಕುವಿನಿಂದ ಅವಳ ಮೇಲೆ ಹಲ್ಲೆ ಮಾಡಿದನು. ಫಿಲಿಪ್‌ ಕಿರುಚಾಟ ಕೇಳಿದಾಗ, ನಾನು ಜೆಹ್‌ನ ಕೋಣೆಗೆ ಹೋದೆ. ಈ ವೇಳೆ ಇಬ್ಬರ ನಡುವೆ ಕಿತ್ತಾಟ ನಡೆಯುತ್ತಿತ್ತು. ಜೆಹ್​ನನ್ನು ಉಳಿಸುವುದಕ್ಕಾಗಿ ನಾನು ದಾಳಿಕೋರನನ್ನು ತಡೆಯಲು ಪ್ರಯತ್ನಿಸಿದೆ. ಆತನನ್ನು ಹಿಡಿದುಕೊಂಡಿದ್ದ ಸಂದರ್ಭದಲ್ಲಿ ದಾಳಿಕೋರ, ನನ್ನ ಬೆನ್ನು, ಕುತ್ತಿಗೆ ಮತ್ತು ತೋಳುಗಳಿಗೆ ಹಲವಾರು ಬಾರಿ ಇರಿದನು. ಇದರಿಂದ ನಾನು ನನ್ನ ಹಿಡಿತನ್ನು ಕಳೆದುಕೊಂಡೆ. ಹೀಗಾಗಿ ಆತ ನನ್ನಿಂದ ತಪ್ಪಿಸಿಕೊಂಡನು. ಇದರ ನಡುವೆ ದಾಳಿಕೋರನಿಂದ ಜೆಹ್‌ನನ್ನು ರಕ್ಷಿಸಿದ ಸಹಾಯಕರು ಅವನನ್ನು ಮತ್ತೊಂದು ಕೋಣೆಗೆ ಕರೆದೊಯ್ದರು ಎಂದು ಸೈಫ್ ಪೊಲೀಸರಿಗೆ ವಿವರಿಸಿದರು.

ಘಟನೆ ನಡೆದ ತಕ್ಷಣ, ಸೈಫ್ ಅಲಿ ಖಾನ್ ಅವರನ್ನು ಅವರ ಕುಟುಂಬದ ಸದಸ್ಯರು ಲೀಲಾವತಿ ಆಸ್ಪತ್ರೆಗೆ ಕರೆದೊಯ್ದರು. ದಾಳಿಕೋರ ಚಾಕುವಿನಿಂದ ಹಲ್ಲೆ ನಡೆಸಿದ್ದರಿಂದ ಸೈಫ್ ಅವರ ಎರಡು ಸ್ಥಳಗಳಲ್ಲಿ ಆಳವಾದ ಗಾಯಗಳಾಗಿವೆ. ಇರಿತದ ಗಾಯವು ಬೆನ್ನುಮೂಳೆಯ ಹತ್ತಿರದವರೆಗೂ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಯ ನಂತರ ಜನವರಿ 21ರಂದು ಸೈಫ್​ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಯಿತು.

ಸೈಫ್ ಮೇಲಿನ ದಾಳಿಯ ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆಯ ಸಮಯದಲ್ಲಿ, ಕಳ್ಳತನ ಮಾಡುವ ಉದ್ದೇಶದಿಂದ ದಾಳಿಕೋರ ಸೈಫ್ ಮನೆಗೆ ಪ್ರವೇಶಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರನನ್ನು ಬಾಂಗ್ಲಾದೇಶದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ ಎಂದು ಗುರುತಿಸಲಾಗಿದೆ. ಸೈಫ್ ಮೇಲಿನ ದಾಳಿಯ ನಂತರ ಹಲ್ಲೆಕೋರ ಶೆಹಜಾದ್ ಪರಾರಿಯಾಗಿದ್ದ. ಆತನನ್ನು ಥಾಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ಸೈಫ್ ಅಲಿ ಖಾನ್ ಅವರ ಬಾಂದ್ರಾ ಫ್ಲಾಟ್‌ನಿಂದ ಸಂಗ್ರಹಿಸಲಾದ ಬೆರಳಚ್ಚುಗಳು ಶರೀಫುಲ್‌ಗೆ ಹೊಂದಿಕೆಯಾಗುತ್ತವೆ ಎಂದು ದೃಢಪಟ್ಟಿದೆ. ಆರೋಪಿ ಕಟ್ಟಡದ ಹನ್ನೊಂದನೇ ಮಹಡಿಗೆ ಏರಲು ಬಳಸಿದ ಡಕ್ಟ್ ಪೈಪ್, ಸೈಫ್​ ಮಗ ಜೆಹ್​ ಕೋಣೆಯ ಬಾಗಿಲಿನ ಹಿಡಿಕೆ ಮತ್ತು ಸ್ನಾನಗೃಹದ ಬಾಗಿಲಿನಲ್ಲಿ ಬೆರಳಚ್ಚುಗಳು ಕಂಡುಬಂದಿವೆ.

ಆದರೆ, ಆರೋಪಿ ಶೆಹಜಾದ್ ತಂದೆ ರುಹುಲ್ ಅಮೀನ್, ಸೈಫ್ ಅಲಿ ಖಾನ್ ಮನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿರುವ ಹಲ್ಲೆಕೋರ ಮತ್ತು ಅವರ ಮಗ ಶೆಹಜಾದ್ ಒಂದೇ ವ್ಯಕ್ತಿಯಲ್ಲ. ಅವರಿಬ್ಬರು ವಿಭಿನ್ನ ವ್ಯಕ್ತಿಗಳು ಎಂದು ಹೇಳಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net