ಇದು ರಿಯಲ್ ಘೋಸ್ಟ್ ಕಥೆ!

the-ghost
Published on

| ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

ಶಿವರಾಜಕುಮಾರ್ ನಾಯಕನಾಗಿರುವ ಶ್ರೀನಿ ಆಕ್ಷನ್ ಕಟ್ ಹೇಳುತ್ತಿರುವ ‘ಘೋಸ್ಟ್’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಶಿವರಾಜಕುಮಾರ್ ಜತೆ ಬಾಲಿವುಡ್ ನಟ ಅನುಪಮ್ ಖೇರ್, ಮಲಯಾಳಂ ನಟ ಜಯರಾಮ್ ಅರ್ಚನಾ ಜೋಯಿಸ್ ಪ್ರಮುಖ ತಾರಾಗಣದಲ್ಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಟೀಸರ್ ಬಿಡುಗಡೆ ಮಾಡಿ, ಅದಾಗುತ್ತಲೇ ರಿಲೀಸ್ ದಿನಾಂಕ ಘೋಷಿಸುವ ಆಲೋಚನೆ ಚಿತ್ರತಂಡದ್ದು. ಅದರ ನಡುವೆಯೇ ರಿಯಲ್ ‘ಘೋಸ್ಟ್’ ಕಥೆ ಅನಾವರಣಗೊಂಡಿದೆ. ಅಂದಹಾಗೆ ಇಲ್ಲಿ ರಿಯಲ್ ‘ಘೋಸ್ಟ್’ ಅಂದರೆ ಒಂದು ಶ್ವಾನ!

‘ಘೋಸ್ಟ್’ ಚಿತ್ರೀಕರಣದ ವೇಳೆ ಬೀದಿ ನಾಯಿಮರಿಯೊಂದು ಓಡಾಡುತ್ತಿತ್ತಂತೆ. ಅದಕ್ಕೆ ಘೋಸ್ಟ್ ಎಂದು ನಾಮಕರಣ ಮಾಡಿರುವ ಚಿತ್ರತಂಡದವರು, ಮನೆಗೆ ಕರೆದೊಯ್ದು ಸಾಕಿಕೊಂಡಿದ್ದಾರೆ. ಘಟನೆ ಕುರಿತು ನಿರ್ದೇಶಕ ಶ್ರೀನಿ, ‘ಎಚ್​ಎಂಟಿಯಲ್ಲಿ ಸಾಹಸ ಸನ್ನಿವೇಶಗಳ ಚಿತ್ರೀಕರಣ ಮಾಡುತ್ತಿದ್ದೆವು. ಅಲ್ಲಿ ಪುಟ್ಟ ನಾಯಿಮರಿಯೊಂದು ಓಡಾಡುತ್ತಿತ್ತು. ಅದಕ್ಕೆ ಘೋಸ್ಟ್ ಎಂದು ಹೆಸರಿಟ್ಟು ಸಾಕುತ್ತಿದ್ದೇವೆ. ಬೀದಿಯಲ್ಲಿದ್ದ ಆ ನಾಯಿಮರಿ ಈಗ ನಮ್ಮ ತಂಡದಲ್ಲಿರುವ ಶ್ರೀಧರ್ ಅವರ ಮನೆಯ ಸದಸ್ಯ. ಬ್ರೀಡ್ ನಾಯಿಗಳನ್ನು ಹಣ ಕೊಟ್ಟು ಖರೀದಿ ಮಾಡುತ್ತೇವೆ. ಆದರೆ, ನಮ್ಮ ದೇಸೀ ತಳಿಗಳ ಬಗ್ಗೆ ಯಾರೂ ಹೆಚ್ಚು ಗಮನ ಹರಿಸುವುದಿಲ್ಲ. ದೇಸೀ ತಳಿಯ ನಾಯಿಗಳನ್ನೂ ದತ್ತು ಪಡೆಯಬೇಕು’ ಎಂದು ಮಾಹಿತಿ ನೀಡುತ್ತಾರೆ ಶ್ರೀನಿ.

ಶಿವಣ್ಣ ಬೆಳ್ಳಿ ಪೆನ್ ಕೊಟ್ಟರು!

ನಿರ್ದೇಶಕ ಶ್ರೀನಿಯ ಕೆಲಸವನ್ನು ಮೆಚ್ಚಿರುವ ಶಿವರಾಜಕುಮಾರ್, ಅವರಿಗೆ ಬೆಳ್ಳಿ ಪೆನ್ ಉಡುಗೊರೆಯಾಗಿ ನೀಡಿದ್ದಾರೆ. ಆ ಬಗ್ಗೆ ಸಂತಸ ಹಂಚಿಕೊಳ್ಳುವ ಶ್ರೀನಿ, ‘ಶಿವಣ್ಣನ ಸಿನಿಮಾ ನೋಡಿಕೊಂಡು ಬೆಳೆದವನು ನಾನು. ಅವರ ಅಭಿಮಾನಿ ಕೂಡ. ಅವರು ನನಗೆ ಪೆನ್ ಕೊಟ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದೀಯಾ, ಇನ್ನೂ ಚೆನ್ನಾಗಿ ಕೆಲಸ ಮಾಡು ಅಂತ ಸಪೋರ್ಟ್ ಮಾಡಿದ್ದು ತುಂಬ ಖುಷಿ ನೀಡಿತು. ಇನ್ನಷ್ಟು ಉತ್ತಮ ಸಿನಿಮಾಗಳನ್ನು ಮಾಡಲು ಶಿವಣ್ಣ ಸ್ಪೂರ್ತಿ ನೀಡಿದ್ದಾರೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net