ಮದುವೆ ಮಂಟಪದಲ್ಲೇ ವರದಕ್ಷಿಣೆಗೆ ಬೇಡಿಕೆಯಿಟ್ಟ ವರನಿಗೆ ಕಾದಿತ್ತು ಭಾರೀ ಆಘಾತ! ವಿಡಿಯೋ ವೈರಲ್​​

UP Groom
Published on

ಲಖನೌ: ಮದುವೆ ಮಂಟಪದಲ್ಲಿ ವಧುವಿಗೆ ಹಾರ ಬದಲಾಯಿಸುವ ಮುನ್ನ ವರದಕ್ಷಿಣೆ ಬೇಡಿಕೆ ಇಡುವ ಮೂಲಕ ವರನೊಬ್ಬ ಸಮಸ್ಯೆಯ ಸುಳಿಗೆ ಸಿಲುಕಿದ ಘಟನೆ ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ನಡೆದಿದೆ.

ವಿಡಿಯೋ ವೈರಲ್

ಮಂಟಪದಲ್ಲೇ ವರ, ವರದಕ್ಷಿಣೆ ಬೇಡಿಕೆ ಇಟ್ಟಿದ್ದನ್ನು ಕೇಳಿ ಶಾಕ್​ ಆದ ವಧುವಿನ ಕಡೆಯವರು, ತೀವ್ರ ಆಕ್ರೋಶ ವ್ಯಕ್ತಪಡಿಸಿ, ವರ ಮತ್ತು ಆತನ ಸಂಬಂಧಿಕರನ್ನು ಒತ್ತೆಯಾಳಾಗಿರಿಸಿಕೊಂಡರು. ವರನನ್ನು ಮರಕ್ಕೆ ಕಟ್ಟಿಹಾಕಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗಿದೆ.

ವರನನ್ನು ಅಮರಜಿತ್​ ವರ್ಮ ಎಂದು ಗುರುತಿಸಲಾಗಿದೆ. ಈತ ಜೌನ್​ಪುರದ ಸಕ್ರಾ ಗ್ರಾಮದ ನಿವಾಸಿ. ವರನ ಕಡೆಯವರು ಪಾನಮತ್ತ ಸ್ಥಿತಿಯಲ್ಲಿದ್ದರು ಮತ್ತು ವಧುವಿನ ಕಡೆಯವರ ಮೇಲೆ ಹಲ್ಲೆಗೆ ಯತ್ನಿಸಿದರು ಎಂಬ ಆರೋಪ ಕೇಳಿಬಂದಿದೆ.

ಸಂಧಾನ ಆಗಲೇ ಇಲ್ಲ

ವೈರಲ್​ ಆಗಿರುವ ವಿಡಿಯೋದಲ್ಲಿ ಆಕ್ರೋಶಗೊಂಡ ವಧುವಿನ ಕುಟುಂಬ ಮರಕ್ಕೆ ಕಟ್ಟಿರುವ ವರನನ್ನು ನಿಂದಿಸುತ್ತಿರುವ ದೃಶ್ಯವಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ವಧು-ವರನ ಕಡೆಯವರನ್ನು ಪೊಲೀಸ್​ ಠಾಣೆಗೆ ಕರೆದೊಯ್ದು ಸಂಧಾನ ಮಾಡಲು ಪ್ರಯತ್ನಿಸಿದರು. ಆದರೆ, ಇಬ್ಬರ ನಡುವೆ ಸಂಧಾನ ಆಗಲೇ ಇಲ್ಲ.

ಸದ್ಯ ಮದುವೆ ಮುಂದೂಡಲಾಗಿದ್ದು, ಇಬ್ಬರ ನಡುವೆ ಮಾತುಕತೆ ಮುಗಿದ ಬಳಿಕ ಮತ್ತೆ ಮದುವೆ ನಡೆಯುವ ಸಾಧ್ಯತೆ ಇದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net