

ಕಣ್ಸನ್ನೇ ಮೂಲಕವೇ ಇಡೀ ದೇಶದಲ್ಲಿ ಸೆನ್ಸೆಷನ್ ಸೃಷ್ಟಿಸಿ ರಾತ್ರೋರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಪ್ರಿಯಾ ವಾರಿಯರ್, ಸದ್ಯ ಹಲವು ಸಿನಿಮಾಗಳಲ್ಲಿ ಬಿಜಿ. ಮೂಲ ಮಲಯಾಳಂ ಆದರೂ, ಹಿಂದಿ, ಕನ್ನಡದಲ್ಲಿಯೂ ಈಗಾಗಲೇ ನಟಿಸಿದ್ದಾರೆ. ಇದೀಗ ಬಂದ ಹೊಸ ಸುದ್ದಿ ಏನೆಂದರೆ, ಟಾಲಿವುಡ್ನ ಖ್ಯಾತ ನಟನಿಗೆ ನಾಯಕಿಯಾಗಿ ಪ್ರಿಯಾ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತು ನಿರ್ದೇಶಕ ಪರಸುರಾಮ್ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಪ್ರಿಯಾ ನಾಯಕಿಯಂತೆ!! ಅಷ್ಟೇ ಅಲ್ಲ ನಿರ್ದೇಶಕರು ಪ್ರಿಯಾ ಅವರ ಜತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಸುದ್ದಿ ಟಾಲಿವುಡ್ನಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗುತ್ತಿದ್ದಂತೆ, ಸ್ವತಃ ನಿರ್ದೇಶಕ ಮುಂದೆ ಬಂದು ಅಸಲಿ ವಿಷಯವನ್ನು ಹೊರಗೆಡವಿದ್ದಾರೆ.
ನಮ್ಮ ಸಿನಿಮಾದಲ್ಲಿ ಪ್ರಿಯಾ ವಾರಿಯರ್ ನಟಿಸುತ್ತಿಲ್ಲ. ಅವರೊಂದಿಗೆ ಯಾವ ಚರ್ಚೆಯೂ ನಡೆದಿಲ್ಲ. ಹಾಗಾಗಿ ವದಂತಿಗಳಿಗೆ ಕಿವಿಗೊಡಬೇಡಿ. ನಾಯಕಿಯ ಹುಡುಕಾಟ ಜಾರಿಯಲ್ಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಸದ್ಯ ಕನ್ನಡದಲ್ಲಿ ರಘು ಕೋವಿ ನಿರ್ದೇಶನದ ಸಿನಿಮಾದಲ್ಲಿ ಪ್ರಿಯಾ ನಟಿಸುತ್ತಿದ್ದು, ಶ್ರೇಯಸ್ ಮಂಜು ಜತೆ ‘ವಿಷ್ಣು ಪ್ರಿಯಾ’ ಚಿತ್ರದಲ್ಲಿದ್ದಾರೆ. ನಿತಿನ್ ಜತೆಗೂ ಸಿನಿಮಾ ಮಾಡುತ್ತಿದ್ದಾರೆ. (ಏಜೆನ್ಸೀಸ್)