ನಟ ದರ್ಶನ್​ ಜಾಮೀನು ರದ್ದಾಗಲು ಕಾರಣಗಳೇನು? ಸುಪ್ರೀಂ ಕೋರ್ಟ್​ ಹೇಳಿದ್ದೇನು? ಇಲ್ಲಿದೆ ಕಂಪ್ಲೀಟ್​ ಮಾಹಿತಿ... Darshan Bail Cancel

Darshan Bail Cancel
Published on

Darshan Bail Cancel : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಮತ್ತು ಇತರ ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಇಂದು (ಆಗಸ್ಟ್​ 14) ಆದೇಶಿಸಿದೆ. ಪರಿಣಾಮವಾಗಿ ಕಳೆದ 7 ತಿಂಗಳಿಂದ ಜಾಮೀನಿನ ಮೇಲೆ ಹೊರಗಡೆ ಇದ್ದ ದರ್ಶನ್​ ಮತ್ತೆ ಜೈಲು ಸೇರಬೇಕಾದ ಸನ್ನಿವೇಶ ಎದುರಾಗಿದೆ. ಆರೋಗ್ಯ ನೆಪ ಹೇಳಿ ಹೈಕೋರ್ಟ್​ನಿಂದ ಜಾಮೀನು ಪಡೆದಿದ್ದ ದರ್ಶನ್​ಗೆ ಸುಪ್ರೀಂಕೋರ್ಟ್​ ಶಾಕ್​ ನೀಡಿದ್ದು, ಈ ಆಘಾತಕಾರಿ ತೀರ್ಪಿಗೆ ದರ್ಶನ್​ ಮಾಡಿದ ಕೆಲವು ಎಡವಟ್ಟುಗಳು ಕೂಡ ಕಾರಣಣವಾಗಿದೆ. ಆ ಕಾರಣಗಳು ಏನೆಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಜಾಮೀನಿನ ಮೇಲೆ ಹೊರಗಡೆದ ಇದ್ದ ಸಂದರ್ಭದಲ್ಲಿ ದರ್ಶನ್ ಪ್ರಕರಣದ ಪ್ರಮುಖ ಸಾಕ್ಷಿಯಾದ ಚಿಕ್ಕಣ್ಣನೊಂದಿಗೆ ಸಿನಿಮಾ ವೀಕ್ಷಿಸಿದ್ದರು. ಇದು ಜಾಮೀನು ಷರತ್ತುಗಳ ಉಲ್ಲಂಘನೆಯಾಗಿದೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದೆಂಬ ಆತಂಕವನ್ನು ಹುಟ್ಟುಹಾಕಿತು. ಇದಲ್ಲದೆ, ಆರೋಗ್ಯದ ನೆಪ ಹೇಳಿಕೊಂಡು ದರ್ಶನ್​ ಜಾಮೀನು ಪಡೆದಿದ್ದರು. ಆಪರೇಷನ್​ ಆಗದಿದ್ದರೆ ದರ್ಶನ್​​ ಸಾಯುವ ಸಾಧ್ಯತೆ ಇದೆ ಎಂದು ಅವರ ಪರ ವಕೀಲರು ವಾದ ಮಾಡಿದ್ದರು. ಆರೋಗ್ಯ ದೃಷ್ಟಿಯಿಂದ ಹೈಕೋರ್ಟ್​ ಜಾಮೀನು ನೀಡಿತು. ಇದಾದ ಬಳಿಕ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ದರ್ಶನ್​ ಯಾವುದೇ ಆಪರೇಷನ್​ ಮಾಡಿಸಿಕೊಳ್ಳದೇ ಆಸ್ಪತ್ರೆಗೆ ಡಿಸ್ಚಾರ್ಜ್​ ಆದರು. ಅಲ್ಲದೆ, ಶೂಟಿಂಗ್​ ಮತ್ತು ವಿದೇಶ ಪ್ರವಾಸದಲ್ಲೂ ಬಿಜಿಯಾದರು. ಈ ಎಲ್ಲ ಅಂಶಗಳು ಜಾಮೀನು ರದ್ದತಿ ಮೇಲೆ ಪರಿಣಾಮ ಬೀರಿದೆ.

ಇನ್ನು ಈ ಪ್ರಕರಣದಲ್ಲಿ ವಿಧಿವಿಜ್ಞಾನ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳು ದರ್ಶನ್‌ಗೆ ವಿರುದ್ಧವಾಗಿವೆ. ಕೊಲೆ ನಡೆದ ಸ್ಥಳದ ಮಣ್ಣು ಮತ್ತು ದರ್ಶನ್‌ರ ಪಾದರಕ್ಷೆಯ ಮಣ್ಣು ಹೊಂದಾಣಿಕೆಯಾಗಿದೆ. ಹಾಗೆಯೇ ಮೃತನ ಡಿಎನ್‌ಎ ಕಲೆಗಳು ಆರೋಪಿಗಳ ಬಟ್ಟೆಯ ಮೇಲೆ ಪತ್ತೆಯಾಗಿವೆ. ಇವುಗಳನ್ನು ಹೈಕೋರ್ಟ್ ಸರಿಯಾಗಿ ಪರಿಗಣಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ.

ದರ್ಶನ್ ಒಬ್ಬ ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷಿಗಳ ಮೇಲೆ ಬೆದರಿಕೆ ಹಾಕುವ ಅಥವಾ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ ಎಂದು ಸರ್ಕಾರಿ ವಕೀಲರು ವಾದಿಸಿದ್ದಾರೆ. ಇದು ಕೂಡ ಜಾಮೀನು ರದ್ದತಿಗೆ ಕಾರಣವಾಗಿದೆ.

ಹೈಕೋರ್ಟ್ ಜಾಮೀನು ನೀಡುವಾಗ ಸೂಕ್ತ ಕಾನೂನು ಮಾನದಂಡಗಳನ್ನು ಪಾಲಿಸಿಲ್ಲ ಎಂದು ಸುಪ್ರೀಂ ಕೊರ್ಟ್​ ಅಭಿಪ್ರಾಯಪಟ್ಟಿದೆ. ಹೈಕೋರ್ಟ್‌ನ ತೀರ್ಪು ದಾಖಲೆಗಳಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಇದಿಷ್ಟೇ ಅಲ್ಲದೆ, ಜೈಲಿನಲ್ಲಿದ್ದಾಗ ದರ್ಶನ್​ಗೆ ಫೈವ್​ ಸ್ಟಾರ್​ ಟ್ರೀಟ್​ಮೆಂಟ್​ ಸಿಕ್ಕಿತ್ತು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಜನರಿಂದ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಜೈಲಿನ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಎರಡು ಎಫ್​ಐಆರ್​ ಕೂಡ ದಾಖಲಾಗಿತ್ತು. ಈ ಅಂಶಗಳು ಕೂಡ ಜಾಮೀನು ರದ್ದಾಗಲು ಕಾರಣವಾಗಿವೆ.

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬಲವಂತವಾಗಿ ಬೆಂಗಳೂರಿಗೆ ಕರೆತಂದು ಕೊಲೆ ಮಾಡಲಾಗಿದೆ, ಇದು ಐಪಿಸಿ ಸೆಕ್ಷನ್ 364ರ ಅಡಿಯಲ್ಲಿ ಗಂಭೀರ ಅಪರಾಧವಾಗಿದೆ. ಈ ಅಂಶವನ್ನು ಹೈಕೋರ್ಟ್ ಸರಿಯಾಗಿ ಪರಿಗಣಿಸಿಲ್ಲ ಎಂದು ಸರ್ಕಾರ ವಾದಿಸಿದೆ. ಅಲ್ಲದೆ, ಸಾಕ್ಷಿಗಳು ಬಲವಾಗಿರುವುದರಿಂದ ಪ್ರಕರಣದ ಗಂಭೀರತೆಯನ್ನು ಅರಿತು ಸುಪ್ರೀಂ ಕೊರ್ಟ್​ ಜಾಮೀನು ರದ್ದು ಮಾಡಿ ಇಂದು ಆದೇಶವನ್ನು ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net