ಧೋನಿ ನಿರ್ಮಾಣದ ಮೊದಲ ಸಿನಿಮಾದಲ್ಲಿ ನಟಿಸಲಿರುವ ಹೀರೋ-ಹೀರೋಯಿನ್​ ಇವರೇ ನೋಡಿ...

Dhoni Film
Published on

ಚೆನ್ನೈ: ಟೀಮ್​ ಇಂಡಿಯಾದ ಮಾಜಿ ನಾಯಕ ಎಂ.ಎಸ್​. ಧೋನಿ ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಇಳಿದಿರುವುದು ನಿಮಗೆಲ್ಲ ಗೊತ್ತೇ ಇದೆ. ಧೋನಿ ಪ್ರೊಡಕ್ಷನ್​ ಅಡಿಯಲ್ಲಿ ಸಿನಿಮಾ ನಿರ್ಮಿಸಲು ಮುಂದಾಗಿರುವ ಧೋನಿ ತಮ್ಮ ನಿರ್ಮಾಣ ಸಂಸ್ಥೆಗೆ ಧೋನಿ ಎಂಟರ್ಟೈನ್​ಮೆಂಟ್​ ಎಂದು ಹೆಸರಿಟ್ಟಿದ್ದಾರೆ. ಇದರ ಮೂಲಕ ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳನ್ನು ಧೋನಿ ನಿರ್ಮಾಣ ಮಾಡಲಿದ್ದಾರೆ.

ಧೋನಿ ನಿರ್ಮಾಣದ ಮೊದಲ ದಕ್ಷಿಣ ಭಾರತದ ಸಿನಿಮಾ ಬಗ್ಗೆ ಇದೀಗ ಆಸಕ್ತಿಕರ ಮಾಹಿತಿಯೊಂದು ಹೊರಬಿದ್ದಿದೆ. ಮೊದಲ ಚಿತ್ರದ ನಿರ್ದೇಶಕ ಯಾರೆಂಬುದನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು, ನಿರ್ದೇಶಕ ರಮೇಶ್​ ತಮಿಳುಮಣಿ ಅವರು ಧೋನಿ ಬ್ಯಾನರ್​ನ ಮೊದಲ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಧೋನಿ ಎಂಟರ್ಟೈನ್​ಮೆಂಟ್​ ಅನ್ನು ಧೋನಿ ಪತ್ನಿ ಸಾಕ್ಷಿ ಸಿಂಗ್​ ನೋಡಿಕೊಳ್ಳಲಿದ್ದು, ಸಿನಿಮಾಗೆ ಬೇಕಾದ ಅಗತ್ಯತೆಗಳನ್ನು ಅವರು ಪೂರೈಸಲಿದ್ದಾರೆ.

ಧೋನಿ ಮೊದಲ ಚಿತ್ರಕ್ಕೆ ನಟ ಮತ್ತು ನಟಿ ಯಾರಾಗಲಿದ್ದಾರೆ ಎಂಬ ಕುತೂಹಲ ಸಹ ಇದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ನಟ ಹರೀಶ್​ ಕಲ್ಯಾಣ್​ ಮತ್ತು ನಟಿ ಪ್ರಿಯಾಂಕ ಅರುಳ್​ ಮೋಹನ್​ ಧೋನಿ ನಿರ್ಮಾಣದ ಮೊದಲ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತ ಅಧಿಕೃತ ಘೋಷಣೆ ಇನ್ನು ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ.

ಕೇವಲ ತಮಿಳು ಭಾಷೆಯಲ್ಲಿ ಮಾತ್ರವಲ್ಲದೆ, ಎಲ್ಲ ಭಾಷೆಯಲ್ಲೂ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಳ್ಳುತ್ತಿದೆ. ಪ್ರಖ್ಯಾತ ಕಲಾವಿದರು ಮತ್ತು ತಂತ್ರಜ್ಞರನ್ನು ಸಿನಿಮಾಗಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಮೊದಲ ಸಿನಿಮಾದಲ್ಲೇ ಯಶಸ್ಸು ಕಾಣಲು ಸರ್ವ ಪ್ರಯತ್ನವನ್ನು ಚಿತ್ರತಂಡ ಮಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net