VIDEO| ಕೋಲು ಹಿಡಿದು ಬಂದು ಮಣ್ಣಿನ ಹಣತೆಗಳನ್ನು ಧ್ವಂಸ ಮಾಡಿದ ಯುವತಿ: ನೆಟ್ಟಿಗರ ತರಾಟೆ

Soil Lamp
Published on

ಲಖನೌ: ಯುವತಿಯೊಬ್ಬಳು ಕೋಲು ಹಿಡಿದು ಬಂದು ಮಣ್ಣಿನ ಹಣತೆ ಮತ್ತು ಮಡಿಕೆಗಳನ್ನು ಧ್ವಂಸ ಮಾಡಿರುವುದಕ್ಕೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವತಿಯ ಮೇಲೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಪತ್ರಕರ್ಪುರಂನ ಗೋಮತಿ ನಗರದಲ್ಲಿ ನಡೆದಿದೆ. ದೀಪಾವಳಿ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಪಕ್ಕದಲ್ಲಿ ಅಂಗಡಿ ತೆರೆದು, ಮಣ್ಣಿನ ಹಣತೆ ಮತ್ತು ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದ. ನನ್ನ ಮನೆಯ ಮುಂದೆಯೇ ಮಾರಾಟ ಮಾಡುತ್ತಿದ್ದಾರೆ ಅಂತಾ ಕೋಪಗೊಂಡ ಯುವತಿಯೊಬ್ಬಳು ಮಣ್ಣಿನ ಹಣತೆ ಮತ್ತು ಮಡಿಕೆಗಳ ಮೇಲೆ ನೀರು ಸುರಿದು ಆಕ್ರೋಶ ಹೊರಹಾಕಿದ್ದಾಳೆ.

ಇಷ್ಟಕ್ಕೆ ಸುಮ್ಮನಾಗದ ಯುವತಿ ಕೋಲು ಹಿಡಿದು ಬಂದು ಹಣತೆ ಮತ್ತು ಮಡಿಕೆಗಳ ಮೇಲೆ ತನ್ನ ಶಕ್ತಿ ಪ್ರದರ್ಶನ ಮಾಡುವ ಮೂಲಕ ಎಲ್ಲವನ್ನು ನಾಶ ಮಾಡಿ, ಅಂಗಡಿಯ ಮಾಲೀಕನನ್ನು ನಿಂದಿಸಿದ್ದಾಳೆ.

ಈ ಬಗ್ಗೆ ಮಾತನಾಡಿರುವ ಅಂಗಡಿ ಮಾಲೀಕ, ನಾನ ಪ್ರತಿ ವರ್ಷ ದೀಪಾವಳಿಯಂದು ಈ ಸ್ಥಳದಲ್ಲೇ ದೀಪಗಳನ್ನು ಮಾರುತ್ತಾ ಬರುತ್ತಿದ್ದೇವೆ ಎಂದಿದ್ದಾರೆ. ಯುವತಿ ನಡೆದುಕೊಂಡ ರೀತಿಗೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆಯ ವಿರುದ್ಧ ಪೊಲೀಸ್ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯುವತಿಯು ಮಾಜಿ ಐಎಎಸ್ ಅಧಿಕಾರಿಯ ಮಗಳಾಗಿದ್ದು, ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವತಿಯ ವರ್ತನೆಯ ವಿರುದ್ಧ ಸಿಟ್ಟಿಗೆದ್ದ ನೆಟ್ಟಿಗರು ಆಕೆಯ ವಿರುದ್ಧ ಸೂಕ್ರ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net