ಸೌತ್ ಸಿನಿಮಾ ಇಂಡಸ್ಟ್ರಿ ಕುರಿತು ತಮನ್ನಾ ಭಾಟಿಯಾ ಅಚ್ಚರಿ ಹೇಳಿಕೆ!

ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ
Published on
ನವದೆಹಲಿ: ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಹಿಳೆಯರತ್ತ ಒಂದು ರೀತಿಯ ‘ಪಿತೃಪ್ರಧಾನ ದೃಷ್ಟಿಕೋನ’ (Patriarchal Vibe) ಕಂಡುಬರುತ್ತದೆ ಮತ್ತು ಅದು ಮಹಿಳಾ ಕಲಾವಿದೆಯರಿಗೆ ಅಷ್ಟಾಗಿ ಪೂರಕವಾಗಿಲ್ಲ ಎಂದು ನಟಿ ತಮನ್ನಾ ಭಾಟಿಯಾ ಹೇಳಿದ್ದಾರೆ. ಫೋರ್ಬ್ಸ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ವೈಯಕ್ತಿಕ ಅನುಭವಗಳ ಆಧಾರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಸಿನಿಮಾಗಳ ಕುರಿತು ಅಭಿಪ್ರಾಯ

ಸಂದರ್ಶನದಲ್ಲಿ ಮಾತನಾಡಿದ ತಮನ್ನಾ, ದಕ್ಷಿಣ ಸಿನಿಮಾಗಳಲ್ಲಿ ಒಂದು ನಿರ್ದಿಷ್ಟ ರೀತಿಯ ದೃಷ್ಟಿಕೋನ ಇದೆ. ಅದು ಪಿತೃಪ್ರಧಾನ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಚಿತ್ರರಂಗದಲ್ಲಿ ಕಮರ್ಷಿಯಲ್ ಯಶಸ್ಸು ಪಡೆಯಲು ಬಲವಾದ ಸ್ಟಾರ್ ಇಮೇಜ್ ಅಗತ್ಯವಾಗುತ್ತದೆ. ಈ ಕಾರಣದಿಂದಾಗಿ ಕಲಾವಿದರಿಗೆ ಕೆಲವು ನಿರ್ಬಂಧಗಳು ಎದುರಾಗಬಹುದು ಎಂದು ಅವರು ಹೇಳಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಿನಿಮಾ ಕ್ಷೇತ್ರವು ಇನ್ನಷ್ಟು ಸೀಮಿತ ಅವಕಾಶಗಳನ್ನು ನೀಡುತ್ತದೆ ಎಂಬ ಭಾವನೆ ತಮ್ಮಲ್ಲಿ ಮೂಡಿದೆ ಎಂದು ತಿಳಿಸಿದ್ದಾರೆ.

ಬಾಲಿವುಡ್‌ನಲ್ಲಿ ಹೆಚ್ಚಿನ ಆಯ್ಕೆಗಳಿವೆ

ಹಿಂದಿ ಚಿತ್ರರಂಗದಲ್ಲಿ ಕಲಾವಿದರಿಗೆ ವಿಭಿನ್ನ ರೀತಿಯ ಅವಕಾಶಗಳು ದೊರೆಯುತ್ತವೆ ಎಂದು ತಮನ್ನಾ ಹೇಳಿದ್ದಾರೆ. ಕೆಲವರು ಕಲಾತ್ಮಕ ಪಾತ್ರಗಳಲ್ಲಿ ಮಿಂಚಬಹುದು, ಇನ್ನು ಕೆಲವರು ಗ್ಲಾಮರಸ್ ಹಾಡುಗಳು ಮತ್ತು ವಾಣಿಜ್ಯ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ. ಒಬ್ಬ ನಟ ಅಥವಾ ನಟಿ ಈ ಎರಡೂ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದರೆ ಅವರು ಸೂಪರ್‌ಸ್ಟಾರ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಮನ್ನಾ ಅಭಿಪ್ರಾಯಪಟ್ಟಿದ್ದಾರೆ.

ಮಹಿಳಾ ನಟಿಯರ ದೀರ್ಘ ವೃತ್ತಿಜೀವನದ ರಹಸ್ಯ

ಒಂದು ದಶಕಕ್ಕಿಂತ ಹೆಚ್ಚು ಕಾಲ ಚಿತ್ರರಂಗದಲ್ಲಿ ಯಶಸ್ವಿಯಾಗಿ ಮುಂದುವರಿದ ಮಹಿಳಾ ನಟಿಯರನ್ನು ಗಮನಿಸಿದರೆ, ಅವರು ಉತ್ತಮ ಕಥಾ ಆಧಾರಿತ ಪಾತ್ರಗಳು ಮತ್ತು ಗ್ಲಾಮರ್ ನಡುವಿನ ಸಮತೋಲನ ಕಾಪಾಡಿಕೊಂಡಿರುವುದು ಕಂಡುಬರುತ್ತದೆ ಎಂದು ತಮನ್ನಾ ಹೇಳಿದ್ದಾರೆ. ತಮ್ಮ ಹೇಳಿಕೆಗಳು ಸಂಪೂರ್ಣವಾಗಿ ವೈಯಕ್ತಿಕ ಅನುಭವಗಳ ಆಧಾರಿತವಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ತಮನ್ನಾ

ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ತಮನ್ನಾ ಭಾಟಿಯಾ ಸಕ್ರಿಯರಾಗಿದ್ದು, ಸುಮಾರು 90 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ‘ಬಾಹುಬಲಿ’, ‘ಊಪಿರಿ’ ಹಾಗೂ ‘ಅರಣ್ಮನೈ 4’ ಸಿನಿಮಾಗಳ ಮೂಲಕ ಅವರು ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ. ಜೊತೆಗೆ, ‘ಜೀ ಕರ್ದಾ’, ‘ಡು ಯು ವಾನಾ ಪಾರ್ಟ್ನರ್’ ಮತ್ತು ‘ಆಖಿರಿ ಸಚ್’ ಸೇರಿದಂತೆ ಹಲವು ಒಟಿಟಿ ಕಾರ್ಯಕ್ರಮಗಳಲ್ಲಿಯೂ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ‘ವ್ವಾನ್ – ಫೋರ್ಸ್ ಆಫ್ ದ ಫಾರೆಸ್ಟ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ,(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net