ದಿನಕ್ಕೊಂದು ಥೀಮ್​ ಪೋಸ್ಟರ್​ ... ಇದು 'ಪೆಂಟಗನ್​' ಸ್ಪೆಷಾಲಿಟಿ

Pentagon - Final
Published on

ಬೆಂಗಳೂರು: ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್​ ಪ್ರೊಡಕ್ಷನ್ಸ್​ನಡಿ 'ಪೆಂಟಗನ್​' ಎಂಬ ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದು ಗೊತ್ತೇ ಇದೆ. ಇದು ಐವರು ನಿರ್ದೇಶಕರು ನಿರ್ದೇಶಿಸುತ್ತಿರುವ ಆಂಥಾಲಜಿ ಸಿನಿಮಾ ಎಂಬುದು ಸಹ ಗೊತ್ತಿರಬಹುದು. ಈ ಚಿತ್ರದ ಮೋಷನ್​ ಪೋಸ್ಟರ್​ ಭಾನುವಾರ (ಜನವರಿ 18) ಸಂಜೆ ಬಿಡುಗಡೆಯಾಗಲಿದೆ.

ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆಯಾಗುವುದಕ್ಕೆ ಸಮಯವಿದೆಯಾದರೂ, ಕಳೆದ ನಾಲ್ಕು ದಿನಗಳಿಂದ ನಾಲ್ಕು ಕಥೆಗಳ ಥೀಮ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಮೊದಲ ಥೀಮ್​ ಪೋಸ್ಟರ್​ ರಚಿತಾ ರಾಮ್​ ಬಿಡುಗಡೆ ಮಾಡಿದರೆ, ಎರಡನೆಯದನ್ನು ಹರಿಪ್ರಿಯಾ ಹೊರತಂದಿದ್ದಾರೆ. ಇನ್ನು ಮೂರು ಮತ್ತು ನಾಲ್ಕನೆಯದನ್ನು ಕ್ರಮವಾಗಿ ಧನಂಜಯ್​ ಮತ್ತು ರಿಷಭ್​ ಶೆಟ್ಟಿ ಬಿಡುಗಡೆಗೊಳಿಸಿದ್ದಾರೆ.

ಈ ಥೀಮ್ ಪೋಸ್ಟರ್​ ಮೂಲಕ ಒಂದೊಂದು ಕಥೆಯ ಆಶಯವನ್ನು ಹೇಳುವ ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ ಗುರು ದೇಶಪಾಂಡೆ. ಇಲ್ಲಿ ಆಶಯಕ್ಕಷ್ಟೇ ಆದ್ಯತೆ ನೀಡಿರುವುದರಿಂದ ಯಾವ ಕಲಾವಿದರ ಫೋಟೋಗಳನ್ನೂ ಹಾಕಲಾಗಿಲ್ಲ ಎನ್ನುತ್ತಾರೆ ಅವರು.

ಈ ಕುರಿತು 'ವಿಜಯವಾಣಿ' ಜತೆಗೆ ಮಾತನಾಡಿದ ಅವರು, 'ಸಾಮಾನ್ಯವಾಗಿ ಪೋಸ್ಟರ್​ಗಳಲ್ಲಿ ಚಿತ್ರದ ತಂತ್ರಜ್ಱರು, ಕಲಾವಿದರ ಹೆಸರುಗಳು ಇರುತ್ತದೆ ಮತ್ತು ಚಿತ್ರದ ಫೋಟೋಗಳು ಇರುತ್ತವೆ. ನಮ್ಮ ಚಿತ್ರದ ಮೋಷನ್​ ಪೋಸ್ಟರ್​ಗಳಲ್ಲಿ ಅವೆಲ್ಲ ಇದ್ದೇ ಇರುತ್ತದೆ. ಆದರೆ, ಚಿತ್ರದಲ್ಲಿ ಐದು ವಿಭಿನ್ನ ಕಥೆಗಳಿರುವುದರಿಂದ, ಆ ಐದು ಕಥೆಗಳ ಸಾರಾಂಶವೇನು ಎಂಬುದನ್ನು ಹೇಳಬೇಕಿತ್ತು. ಹಾಗಾಗಿ ಪ್ರತಿ ಕಥೆಯ ಥೀಮ್​ ಪೋಸ್ಟರ್ ಮಾಡಿ ಬಿಡುಗಡೆ ಮಾಡಿದ್ದೇವೆ. ಒಂದು ಪೋಸ್ಟರ್​ನಲ್ಲಿ ಗನ್​ ಇದ್ದರೆ, ಇನ್ನೊಂದರಲ್ಲಿ ಗುಲಾಬಿ ಹೂವಿದೆ. ಇನ್ನೊಂದರಲ್ಲಿ ಇನ್ನೇನೋ ಇರುತ್ತದೆ. ಅದರ ಮೂಲಕ ಕಥೆಯ ಆಶಯವನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ' ಎನ್ನುತ್ತಾರೆ.

ಈ ಎಲ್ಲ ಥೀಮ್​ ಪೋಸ್ಟರ್​ಗಳು ಪ್ರತಿದಿನ ಸಂಜೆ ಐದು ಗಂಟೆ ಐದು ನಿಮಿಷಕ್ಕೆ ಬಿಡುಗಡೆಯಾಗಿದ್ದು, ಅದರಂತೆ ಮೋಷನ್​ ಪೋಸ್ಟರ್​ ಸಹ ಜನವರಿ 18ರ ಭಾನುವಾರ ಸಂಜೆ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net