The Vaccine WarReview : ಯುದ್ಧ ಗೆದ್ದ ವಿಜ್ಞಾನಿಗಳ ಮಹಾಗಾಥೆ

Vaccine-War-2-2
Published on

ಚಿತ್ರ: ದಿ ವ್ಯಾಕ್ಸಿನ್ ವಾರ್
ನಿರ್ದೇಶನ: ವಿವೇಕ್ ಅಗ್ನಿಹೋತ್ರಿ
ನಿರ್ಮಾಣ: ಪಲ್ಲವಿ ಜೋಶಿ
ತಾರಾಗಣ: ನಾನಾ ಪಾಟೇಕರ್, ಅನುಪಮ್ ಖೇರ್, ಪಲ್ಲವಿ ಜೋಶಿ, ಸಪ್ತಮಿ ಗೌಡ, ರೈಮಾ ಸೇನ್, ಗಿರಿಜಾ ಮುಂತಾದವರು
ಸ್ಟಾರ್: 3.5

‘ಇಂಡಿಯಾ ಕಾಂಟ್ ಡು ಇಟ್..’ ಈ ಮಾತು 2020ರಲ್ಲಿ ಭಾರತಕ್ಕೆ ಕರೊನಾ ವೈರಸ್ ಬಂದಾಗ, ಅದರ ವಿರುದ್ಧ ಹೋರಾಡಲು ವಿಜ್ಞಾನಿಗಳು ಲಸಿಕೆ ತಯಾರಿಸಲು ಮುಂದಾದಾಗ ಕೆಲವರಿಂದ ಕೇಳಿಬಂದ ಮಾತು. ಆದರೆ, ಇದನ್ನು ಸುಳ್ಳಾಗಿಸಿ ವಿಜ್ಞಾನಿಗಳು ಹೇಗೆ ಭಾರತ ಸ್ವಂತ ಸಾಮರ್ಥ್ಯದಿಂದ ಲಸಿಕೆ ತಯಾರಿಸಿತು? ‘ಇಂಡಿಯಾ ಕ್ಯಾನ್ ಡು ಇಟ್’ ಎಂಬುದನ್ನು ಸಾಬೀತು ಮಾಡಿತು ಎನ್ನುವುದೇ ‘ದಿ ವ್ಯಾಕ್ಸಿನ್ ವಾರ್’. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹಿಂದಿನ ಸಿನಿಮಾಗಳಂತೆ ಇದು ಕೂಡ ಇದು ನೈಜ ಘಟನೆ ಆಧಾರಿತ ಚಿತ್ರ. ಕರೊನಾ ಸಂದರ್ಭದಲ್ಲಿ ಜನ ಎಷ್ಟೆಲ್ಲ ಸಂಕಷ್ಟ ಅನುಭವಿಸಿದರು? ಎಷ್ಟು ಜನ ಪ್ರಾಣ ಕಳೆದುಕೊಂಡರು? ಇಡೀ ಜಗತ್ತು ಹೇಗೆ ಭಯಭೀತಿಯಲ್ಲಿತ್ತು? ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅಂತಹ ಸಂದರ್ಭದಲ್ಲಿ ಇಂಡಿಯನ್ ಕೌನ್ಸಿಲ್ ಆ್ ಮೆಡಿಕಲ್ ರೀಸರ್ಚ್ ಹಾಗೂ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆ್ ವಿರಾಲಜಿಯ ವಿಜ್ಞಾನಿಗಳು ಈ ವೈರಾಣು ವಿರುದ್ಧ ಹೋರಾಡಲು ಸಿದ್ಧವಾಗಿದ್ದರು. ತಮ್ಮ ವೈಯಕ್ತಿಕ ಜೀವನ, ಆರೋಗ್ಯ ಯಾವುದನ್ನೂ ಲೆಕ್ಕಿಸದೇ ದೇಶವನ್ನು ರಕ್ಷಿಸಲು ಸೈನಿಕರಂತೆ ಹೋರಾಡಿ ಅಲ್ಪಾವಧಿಯಲ್ಲಿ ಲಸಿಕೆ ಕಂಡುಹಿಡಿದವರ ಕಥೆಯನ್ನು ಮನಮುಟ್ಟುವಂತೆ ವಿವೇಕ್ ಚಿತ್ರದಲ್ಲಿ ತೋರಿಸಿದ್ದಾರೆ.

ಕೆಲವರಿಗೆ ಇದೊಂದು ಪ್ರಚಾರಯಂತ್ರ ಸಿನಿಮಾ ಎಂದೆನಿಸಬಹುದು. ಆದರೆ, ಇಲ್ಲಿ ದೇಶದ ವಿಜ್ಞಾನಿಗಳ ಸಂಘರ್ಷ ಹಾಗೂ ಪರಿಶ್ರಮ ಮಾತ್ರ ಮುಖ್ಯವಾಗುವಂತೆ ನಿರೂಪಿಸಲಾಗಿದೆ. ರಾಜಕೀಯ, ಚುನಾವಣೆ ಗಿಮಿಕ್ ಹೀಗೆ ಕಾರಣಗಳಿದ್ದರೂ ದೇಶ ಅಂತ ಬಂದಾಗ ಎಲ್ಲರೂ ಒಂದಾಗಬೇಕು ಎನ್ನುವ ಸಂದೇಶವೂ ಚಿತ್ರದಲ್ಲಿದೆ. ಕಥೆಯ ಕೇಂದ್ರ ಕೂಡ ಲಸಿಕೆ ತಯಾರಿಸುವ ಕಾರ್ಯಕ್ಕೆ ಮಾತ್ರ ಸೀಮಿತಿವಾಗಿದೆ. ಹೊರಗೆ ಪ್ರತಿಯೊಬ್ಬರು ಜೀವ ಉಳಿಸಿಕೊಳ್ಳಲು ಪರದಾಡುತ್ತಿರುವಾಗ, ಊರುಗಳು ಸ್ಮಶಾನ ಆಗುತ್ತಿರುವಾಗ ಎಷ್ಟು ಸಂಕಟ ಆಗಿತ್ತೋ, ಅಲ್ಲಿ ವಿಜ್ಞಾನಿಗಳು ಜೀವ ಉಳಿಸಲು ಒದ್ದಾಡುತ್ತಿರುವುದನ್ನು ನೋಡುವಾಗ, ಲಸಿಕೆ ತಯಾರಿಸಿದಾಗ ಹೆಮ್ಮೆ ಆಗುವಂತೆ ಮಾಡುತ್ತದೆ ಸಿನಿಮಾ. ಇವೆಲ್ಲವನ್ನೂ ಸುಮಾರು 12 ಅಧ್ಯಾಯಗಳಲ್ಲಿ ಹೇಳಲಾಗಿದೆ. ವಿಶೇಷ ಎಂದರೆ ಈ ವಿಜ್ಞಾನಿಗಳ ಪಟ್ಟಿಯಲ್ಲಿ ಅನೇಕರು ಮಹಿಳೆಯರೇ ಆಗಿದ್ದರು.

ಡಾ. ಬಲರಾಮ್ ಭಾರ್ಗವ್ ಪಾತ್ರದಲ್ಲಿ ನಾನಾ ಪಾಟೇಕರ್, ಡಾ. ಪ್ರಿಯಾ ಅಬ್ರಹಂ ಆಗಿ ಪಲ್ಲವಿ ಜೋಶಿ, ಸಪ್ತಮಿ ಗೌಡ, ಅನುಪಮ್ ಖೇರ್, ರೈಮಾ ಸೇನ್ ಎಲ್ಲರ ಅಭಿನಯವೂ ಸಹಜವಾಗಿ ಮೂಡಿಬಂದಿದ್ದು, ಇಷ್ಟವಾಗುತ್ತಾರೆ. ಎರಡು ಹಾಡುಗಳು ಚೆನ್ನಾಗಿವೆ ಬಿಟ್ಟರೆ ಹಿನ್ನೆಲೆ ಸಂಗೀತ ಸಾಮಾನ್ಯ. ದೇಶದ ಸಾಧನೆಗಳನ್ನು ತೋರಿಸಿ ಸ್ಫೂರ್ತಿ ನೀಡುವ ಸಿನಿಮಾ ‘ದಿ ವ್ಯಾಕ್ಸಿನ್ ವಾರ್’.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net