

Actor Vishal : ತಮಿಳು ಚಿತ್ರರಂಗದ ಸ್ಟಾರ್ ಹೀರೋ ವಿಶಾಲ್, ಚಿತ್ರರಂಗದ ಬಗ್ಗೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಸದ್ಯ ಸಿನಿಮಾ ಉದ್ಯಮದ ಪರಿಸ್ಥಿತಿ ಚೆನ್ನಾಗಿಲ್ಲ. ಜನರು ಸಿನಿಮಾ ಮಾಡಿ ಹಣವನ್ನು ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ ವಿಶಾಲ್, ನಾನು ಈ ಹಿಂದೆ ಚಿತ್ರರಂಗದ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಪ್ರಸ್ತುತ ಸಿನಿಮಾ ರಂಗದ ಪರಿಸ್ಥಿತಿ ಚೆನ್ನಾಗಿಲ್ಲ. ಈ ಮಾತನ್ನು ಹೇಳಿದರೆ, ನನ್ನನ್ನು ಖಳನಾಯಕನಂತೆ ನೋಡುತ್ತಾರೆ. ಆದರೆ ನಾನು ಹೇಳೋದು ನಿಜ. ಇಲ್ಲಿ ಸಣ್ಣ ಚಿತ್ರ ಮಾಡಲು ಕನಿಷ್ಠ 4 ಕೋಟಿ ರೂ. ಖರ್ಚು ಮಾಡಬೇಕು. ದಯವಿಟ್ಟು ಆ ಹಣವನ್ನು ನಿಮ್ಮ ಮಕ್ಕಳ ಹೆಸರಿನಲ್ಲಿ ಡೆಪಾಸಿಟ್ ಮಾಡಿ ಅಥವಾ ಭೂಮಿಯನ್ನು ಖರೀದಿಸಿ. ಆ ಹಣವನ್ನು ಸಿನಿಮಾದಲ್ಲಿ ಹೂಡಿಕೆ ಮಾಡುವ ಮೂಲಕ ಹಣವನ್ನು ಕಳೆದುಕೊಳ್ಳಬೇಡಿ ಎಂದು ವಿಶಾಲ್ ಹೇಳಿದ್ದಾರೆ.
ಪ್ರಸ್ತುತ ಸಿನಿಮಾ ರಂಗದ ಪರಿಸ್ಥಿತಿ ಚೆನ್ನಾಗಿಲ್ಲ. ಹಣವಿರುವ ಯಾರಾದರೂ ಸಿನಿಮಾ ಮಾಡಬಹುದು. ವಿಜಯ್ ಮಲ್ಯ ಮತ್ತು ಅಂಬಾನಿ ಕೂಡ ಸಿನಿಮಾ ಮಾಡಬಹುದು. ಅವರ ಬಳಿ ತುಂಬಾ ಹಣವಿದೆ. ಆದರೆ, ಅವರು ಯಾಕೆ ಸಿನಿಮಾ ಮಾಡುತ್ತಿಲ್ಲ? ಏಕೆಂದರೆ ಸಿನಿಮಾ ಉದ್ಯಮದಲ್ಲಿ ಸರಿಯಾದ ಲಾಭವಿಲ್ಲ ಎಂದು ಅವರಿಗೆ ತಿಳಿದಿದೆ ಎಂದು ವಿಶಾಲ್ ಹೇಳಿದರು.
ಕಾಲಿವುಡ್ ಕಳೆದ ವರ್ಷ ಭಾರಿ ನಷ್ಟವನ್ನು ಅನುಭವಿಸಿತು. ಇಡೀ ವರ್ಷದಲ್ಲಿ ನಿರ್ಮಾಣವಾದ 240 ಚಿತ್ರಗಳಲ್ಲಿ, ಅವುಗಳಲ್ಲಿ ಕೇವಲ 18 ಚಿತ್ರಗಳು ಮಾತ್ರ ಯಶಸ್ವಿಯಾದವು. ಒಟ್ಟಾರೆಯಾಗಿ, ಸುಮಾರು 1000 ಕೋಟಿ ರೂ. ನಷ್ಟ ಸಂಭವಿಸಿದೆ ಎಂದರು.
12 ವರ್ಷಗಳ ಹಿಂದೆ ವಿಶಾಲ್ ನಾಯಕನಾಗಿ ನಟಿಸಿದ್ದ 'ಮದಗಜ ರಾಜ' ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಹಲವು ದಿನಗಳ ನಂತರ, ವಿಶಾಲ್ ಅವರ ಚಿತ್ರವು 50 ಕೋಟಿ ರೂ. ಕಲೆಕ್ಷನ್ ಮಾಡಿದೆ. ಹೀಗಾಗಿ ವಿಶಾಲ್ ಅವರು ಬುಧವಾರ ಚೆನ್ನೈನ ಕಪಾಲೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಚಿತ್ರ ಯಶಸ್ವಿಯಾದರೆ ದೇವಸ್ಥಾನಕ್ಕೆ ಬರುವುದಾಗಿ ಮೊದಲೇ ಪ್ರತಿಜ್ಞೆ ಮಾಡಿದ್ದೆ. ನಿರೀಕ್ಷೆಯಂತೆ ಚಿತ್ರ ಹಿಟ್ ಆಗಿದ್ದರಿಂದ ಪ್ರತಿಜ್ಞೆಯನ್ನು ಪೂರೈಸಿದ್ದೇನೆ ಎಂದರು. ಅಂದಹಾಗೆ ಸುಂದರ್ ಸಿ ನಿರ್ದೇಶನದ ಈ ಚಿತ್ರದಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಮತ್ತು ಅಂಜಲಿ ನಾಯಕಿಯರಾಗಿ ನಟಿಸಿದ್ದಾರೆ. ಸಂಕ್ರಾಂತಿ ಉಡುಗೊರೆಯಾಗಿ ಬಿಡುಗಡೆಯಾದ ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಆಕ್ಷನ್ ಹಾಗೂ ಹಾಸ್ಯಮಯ ಮನರಂಜನಾ ಚಿತ್ರವನ್ನು ಜನವರಿ 31 ರಂದು ಸತ್ಯಕೃಷ್ಣನ್ ಪ್ರೊಡಕ್ಷನ್ಸ್ ತೆಲುಗಿನಲ್ಲಿ ಬಿಡುಗಡೆ ಮಾಡಲಿದೆ. (ಏಜೆನ್ಸೀಸ್)