ಆಶಿಕಾ ಕುಡಿದು ತೂರಾಡಿದ್ದು ನಿಜಾನಾ? ಸತ್ಯಾಂಶ ಏನು?

Ashika Ranganath
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಆಶಿಕಾ ರಂಗನಾಥ್​ ಭಯಂಕರ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಸೋಷಿಯಲ್​ ಮೀಡಿಯಾದಲ್ಲಿ ಅವರ ಒಂದು ವಿಡಿಯೋ ಹರಿದಾಡುತ್ತಿರುವುದು. ಆಶಿಕಾ ಕುಡಿದು ತೂರಾಡುತ್ತಿರುವ ದೃಶ್ಯವಿರುವ ಈ ವಿಡಿಯೋ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಆಶಿಕಾ ಕುಡಿದು ತೂರಾಡಿದ್ದು ನಿಜವಾ? ಕುಡಿದ ಅಮಲಿನಲ್ಲಿ ಅವರು ಮಧ್ಯದ ಬೆರಳು ತೋರಿಸಿದ್ದು ಎಷ್ಟು ಸರಿ? ಈ ಘಟನೆ ನಡೆದಿದ್ದು ಎಲ್ಲಿ? ಘಟನೆ ಆಗಿದ್ದು ಯಾವಾಗ? ಇಂತಹ ಪ್ರಶ್ನೆಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಅಷ್ಟೇ ಅಲ್ಲ, ಅದಕ್ಕಾಗಿ ಆಶಿಕಾ ನೆಟ್ಟಿಗರಿಂದ ಸಾಕಷ್ಟು ಟ್ರೋಲ್​ ಆಗುತ್ತಿದ್ದಾರೆ.

ನಿಜ ಏನೆಂದರೆ, ಆಶಿಕಾ ಕುಡಿದು ತೂರಾಡಿಲ್ಲ. ಇದು 'ರೆಮೋ' ಚಿತ್ರದ ಶೂಟಿಂಗ್​ ಸಂದರ್ಭದಲ್ಲಿ ಮಾಡಿದ ಮೇಕಿಂಗ್​ ವಿಡಿಯೋ. ಈ ಚಿತ್ರದಲ್ಲಿ ಆಶಿಕಾ ದೊಡ್ಡ ಸೆಲೆಬ್ರಿಟಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ಹಂತದಲ್ಲಿ ಕಾರಣಾಂತರಗಳಿಂದ ಅವರು ಮಾನಸಿಕವಾಗಿ ನೊಂದು, ಕುಡಿತಕ್ಕೆ ಶರಣಾಗಿರುತ್ತಾರೆ. ಒಮ್ಮೆ ಕುಡಿದು ಕಾರ್​ ಓಡಿಸುವಾಗ, ಪೊಲೀಸರು ಅವರನ್ನು ತಡೆಯುತ್ತಾರೆ. ಇದು ಚಿತ್ರದಲ್ಲಿ ನಡೆಯುವ ದೃಶ್ಯ. ಈಗ ಈ ದೃಶ್ಯವೇ ನೈಜ ಘಟನೆ ಎಂಬಂತೆ ಬಿಂಬಿತವಾಗುತ್ತಿದೆ. ಮುಂದಿನ ವಾರ ಚಿತ್ರ ಬಿಡುಗಡೆಯಾಗುತ್ತಿದ್ದು, ಇದೇ ವಿಡಿಯೋವನ್ನು ಮುಂದಿಟ್ಟುಕೊಂಡು ಪ್ರಚಾರಕ್ಕೆ ಬಳಸಿಕೊಂಡಿರುವ ಸಾಧ್ಯತೆಯೂ ಇದೆ.

'ರೆಮೋ' ಚಿತ್ರದಲ್ಲಿ ಇಶಾನ್​ ಮತ್ತು ಆಶಿಕಾ ರಂಗನಾಥ್​ ನಾಯಕ-ನಾಯಕಿಯಾಗಿ ನಟಿಸಿದ್ದು, ಪವನ್​ ಒಡೆಯರ್​ ನಿರ್ದೇಶನ ಮಾಡಿದ್ದಾರೆ. ಸಿ.ಆರ್​. ಮನೋಹರ್​ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ವೈದಿ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರವು ನ. 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net