

ಬೆಂಗಳೂರು: ‘5 ಅಡಿ 7 ಅಂಗುಲ..’ - ನಾಪತ್ತೆ ಆದವರ ಲಕ್ಷಣಗಳನ್ನು ಕಾಣೆಯಾದವರ ಪ್ರಕಟಣೆಯಲ್ಲಿ ಸಾಮಾನ್ಯವಾಗಿ ಈ ರೀತಿ ಹೇಳಲಾಗುತ್ತದೆ. ಅದರಲ್ಲಿನ ಈ ಸಾಲನ್ನೇ ಶೀರ್ಷಿಕೆ ಆಗಿಸಿಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ, ನಿರ್ವಪಕ ನಂದಳಿಕೆ ನಿತ್ಯಾನಂದ ಪ್ರಭು.
ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರಂತೆ. ‘ತಂತ್ರ, ಯುಕ್ತಿ, ಚೇಷ್ಟೆ ಮತ್ತು ಕುತಂತ್ರ, ಕುಯುಕ್ತಿ, ಕುಚೇಷ್ಟೆ ಈ 3 ವ್ಯತ್ಯಾಸಗಳನ್ನೇ ಆಧರಿಸಿ ಸಿನಿಮಾ ಮಾಡಿದ್ದೇವೆ. ಜತೆಗೆ ಶೀರ್ಷಿಕೆಗೂ ಚಿತ್ರದ ಕಥೆಯಲ್ಲಿ ನ್ಯಾಯ ಒದಗಿಸಿದ್ದೇವೆ. ಅದೇನೆಂಬುದು ಚಿತ್ರದಲ್ಲೇ ರಿವೀಲ್ ಆಗಲಿದೆ’ ಎನ್ನುವ ನಿರ್ದೇಶಕ, ಕಥೆಯ ಒಂದೆಳೆ ಹೊರಗೆಡಹುತ್ತಾರೆ. ‘ಕೊಲೆ ರಹಸ್ಯದ ಜತೆಗೆ ಇಡೀ ಸಿನಿಮಾ ಸಾಗಲಿದೆ. ಹುಡುಕಾಟ ಮತ್ತು ತನಿಖೆಯೂ ಇಲ್ಲಿದೆ. ಕಾಗೆಯೂ ಇಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಲಿದೆ’ ಎಂದು ಕಥೆಯಲ್ಲಿನ ಕುತೂಹಲಕಾರಿ ಅಂಶಗಳ ಬಗ್ಗೆ ಮಾಹಿತಿ ನೀಡುತ್ತಾರೆ ನಿತ್ಯಾನಂದ ಪ್ರಭು.
ನಾಯಕನಾಗಿ ರಾಸಿಕ್ ಕುಮಾರ್ ನಟಿಸಿದ್ದು, ಅವರಿಗೆ ಅದಿತಿ ನಾಯಕಿಯಾಗಿದ್ದಾರೆ. ಭುವನ್ ನಾರಾಯಣ್, ವೀಣಾ ಸುಂದರ್, ಸತ್ಯನಾಥ್, ಪ್ರಣವಮೂರ್ತಿ, ಚಕ್ರವರ್ತಿ ದಾವಣಗೆರೆ, ಮಹದೇವ, ಮಾ. ಮಹೇಂದ್ರಪ್ರಸಾದ್, ವಿ. ಕೃಷ್ಣಮೂರ್ತಿ, ನರೇಂದ್ರ, ವಿನಯ್ ಕುಮಾರ್ ಪಾತ್ರವರ್ಗದಲ್ಲಿದ್ದಾರೆ. ರಘುಠಾಣೆ ಸಂಗೀತ, ರುದ್ರಮುನಿ ಬೆಳಗೆರೆ ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ನೆಲಮಂಗಲ, ಮಡಿಕೇರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ನಿರ್ದೇಶಕ ನಿತ್ಯಾನಂದ ಪ್ರಭು ಮತ್ತು ಅವರ ತಂದೆ ನಂದಳಿಕೆ ಚಂದ್ರಶೇಖರ್ ಪ್ರಭು ನಿರ್ವಣದಲ್ಲಿ ಈ ಚಿತ್ರ ತಯಾರಾಗಿದ್ದು, ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ.