ಆ ಹೀರೋಗೆ ದೊಡ್ಡ ನಟಿಯೇ ಬೇಕಿತ್ತಂತೆ...ಮಮಿತಾರನ್ನು ರಿಜೆಕ್ಟ್ ಮಾಡಿದ್ದ ನಾಯಕನಿಗೆ ಈಗ ಆಕೆಯ ಕಾಲ್‌ಶೀಟೇ ಸಿಗಲ್ಲ! Mamita Baiju

Mamita Baiju
ಮಲಯಾಳಂ ನಟಿ ಮಮಿತಾ ಬೈಜು
Published on: 

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಹೆಸರಾಂತ ನಿರ್ದೇಶಕ ಕಮಲ್ ಅವರು ನಟಿ ಮಮಿತಾ ಬೈಜು (Mamita Baiju) ಕುರಿತು ಹಂಚಿಕೊಂಡಿರುವ ಕುತೂಹಲಕಾರಿ ಸಂಗತಿಯೊಂದು ಸದ್ಯ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 'ಪ್ರೇಮಲು' (Premalu) ಸಿನಿಮಾದ ಮೂಲಕ ಇಡೀ ದಕ್ಷಿಣ ಭಾರತದಲ್ಲೇ ಸಿಕ್ಕಾಪಟ್ಟೆ ಸದ್ದು ಮಾಡಿ, ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಮಮಿತಾ ಬೈಜು ಅವರನ್ನು ಒಮ್ಮೆ ಹೀರೋ ಮತ್ತು ನಿರ್ಮಾಪಕರೊಬ್ಬರು "ಆಕೆ ಹೊಸಬಳು, ದೊಡ್ಡ ನಟಿ ಬೇಕು" ಎಂದು ತಿರಸ್ಕರಿಸಿದ್ದರಂತೆ! ಆದರೆ ಇಂದು ಅದೇ ನಟಿ ಕಾಲ್‌ಶೀಟ್ ಸಿಗದಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ ಎಂದು ನಿರ್ದೇಶಕ ಕಮಲ್ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ನಿರ್ದೇಶಕ ಕಮಲ್ ಅವರು ಯೂಟ್ಯೂಬ್ ವಾಹಿನಿಯೊಂದರ ಜತೆ ಮಾತನಾಡುತ್ತಾ, ತಮ್ಮ ನೆಚ್ಚಿನ ನವಪೀಳಿಗೆಯ ನಟಿ ಮಮಿತಾ ಬೈಜು ಎಂದು ಹೇಳಿದ್ದಾರೆ. ನನಗೆ ಮಮಿತಾ ಅಭಿನಯದ 'ಖೋ ಖೋ' (Kho Kho) ಸಿನಿಮಾ ನೋಡಿದಾಗಲೇ ಅವರ ನಟನೆ ಭಾರಿ ಮೆಚ್ಚುಗೆಯಾಗಿತ್ತು. ಅವರಲ್ಲಿದ್ದ ಪ್ರತಿಭೆಯನ್ನು ಗುರುತಿಸಿ, ನನ್ನ ಮುಂಬರುವ ಹೊಸ ಕಥೆಗೆ ಅವರನ್ನೇ ನಾಯಕಿಯನ್ನಾಗಿ ಮಾಡಲು ತೀರ್ಮಾನಿಸಿದೆ. ಆ ಪಾತ್ರವನ್ನು ಮಮಿತಾ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು ಎಂಬ ಸಂಪೂರ್ಣ ಭರವಸೆ ನನಗಿತ್ತು. ಹೀಗಾಗಿ ಆ ಪಾತ್ರಕ್ಕಾಗಿ ಮಮಿತಾ ಅವರನ್ನೇ ಫಿಕ್ಸ್ ಮಾಡಿ, ನನ್ನ ಸಿನಿಮಾದ ನಾಯಕ ನಟ ಹಾಗೂ ನಿರ್ಮಾಪಕರಿಗೆ ವಿಷಯ ತಿಳಿಸಿದೆ ಎಂದು ಕಮಲ್ ನೆನಪಿಸಿಕೊಂಡಿದ್ದಾರೆ.

Also Read
ಸೋದರಮಾವನ ಜೊತೆ ಮದುವೆ, ವಯಸ್ಸಾದ ನಟನೊಂದಿಗೆ ರೊಮ್ಯಾನ್ಸ್: ಸೌತ್​ ಇಂಡಸ್ಟ್ರಿ ವಿರುದ್ಧ ನಾಲಿಗೆ ಹರಿಬಿಟ್ಟ ರಾಧಿಕಾ ಆಪ್ಟೆ; ಭುಗಿಲೆದ್ದ ಆಕ್ರೋಶ! Radhika Apte
Mamita Baiju

ಆದರೆ, ಕಮಲ್ ಅವರ ಈ ಪ್ರಸ್ತಾವನೆಯನ್ನು ಸಿನಿಮಾದ ನಾಯಕ ನಟ ಹಾಗೂ ನಿರ್ಮಾಪಕರು ಸಂಪೂರ್ಣವಾಗಿ ತಳ್ಳಿಹಾಕಿದ್ದರು. ನಮಗೆ ಇಷ್ಟು ಹೊಸಬರಾಗಿರುವ ನಾಯಕಿ ಬೇಡ, ಚಿತ್ರರಂಗದಲ್ಲಿ ಈಗಾಗಲೇ ಪ್ರಸಿದ್ಧಿಯಾಗಿರುವ ದೊಡ್ಡ ನಟಿಯೇ ಬೇಕು" ಎಂದು ನಟ ಮತ್ತು ನಿರ್ಮಾಪಕ ಪಟ್ಟು ಹಿಡಿದಿದ್ದರು. ಈ ವೇಳೆ ಕಮಲ್ ಅವರು, "ಈ ಹುಡುಗಿ ಭವಿಷ್ಯದಲ್ಲಿ ಅತ್ಯಂತ ದೊಡ್ಡ ಮಟ್ಟದ ನಟಿಯಾಗಲಿದ್ದಾಳೆ, ಜಸ್ಟ್ ಕಾದು ನೋಡಿ" ಎಂದು ಧೈರ್ಯ ತುಂಬಿದರೂ ಅವರಿಬ್ಬರೂ ಮಮಿತಾ ಅವರನ್ನು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ನಂತರ 'ಸೂಪರ್ ಶರಣ್ಯ' ಸಿನಿಮಾ ನೋಡಿದ ಮೇಲಂತೂ ಮಮಿತಾ ಅವರ ನಟನೆಯನ್ನು ಮತ್ತಷ್ಟು ಇಷ್ಟಪಟ್ಟು, ಅವರನ್ನೇ ನಾಯಕಿಯನ್ನಾಗಿ ಮಾಡಲು ಕಮಲ್​ ನಿರ್ಧರಿಸಿದ್ದರು.

ನಿರ್ಮಾಪಕರು 'ಹೀರೋಗೆ ಕನ್ವಿನ್ಸ್ ಮಾಡೋಣ' ಎಂದಿದ್ದಕ್ಕೆ, ಕಮಲ್ ಅವರು ಮಮಿತಾ ಬೈಜು ಮತ್ತು ಅವರ ತಾಯಿಯನ್ನು ಕರೆಸಿ ಸಿನಿಮಾದ ಕಥೆಯನ್ನು ವಿವರಿಸಿದ್ದರು. ಆ ಪಾತ್ರದಲ್ಲಿ ಸ್ವಲ್ಪ ನೆಗೆಟಿವ್ ಶೇಡ್ ಇದ್ದರೂ ಸಹ, ಕಥೆ ಕೇಳಿದ ಮಮಿತಾ ಅತ್ಯಂತ ಉತ್ಸಾಹದಿಂದ ಅಭಿನಯಿಸಲು ಒಪ್ಪಿಕೊಂಡಿದ್ದರು. ಕಥೆ ಕೇಳುವಾಗ ಅವರ ಮುಖದಲ್ಲಿದ್ದ ಖುಷಿ ಮತ್ತು ಹಾವಭಾವಗಳನ್ನು ಕಮಲ್ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಶೂಟಿಂಗ್ ದಿನಾಂಕಗಳನ್ನು ಮುಂಚಿತವಾಗಿ ತಿಳಿಸುವಂತೆ ಮಮಿತಾ ಅವರ ತಾಯಿಯೂ ಕೇಳಿಕೊಂಡಿದ್ದರು. ಆದರೆ, ಮತ್ತೊಮ್ಮೆ ಹೀರೋ ಮತ್ತು ನಿರ್ಮಾಪಕರು "ನಮಗೆ ಈ ನಾಯಕಿ ಸೂಕ್ತವಲ್ಲ, ದೊಡ್ಡ ನಟಿಯೇ ಬೇಕು" ಎಂದು ಪಟ್ಟು ಹಿಡಿದು ಮಮಿತಾ ಅವರನ್ನು ಆ ಯೋಜನೆಯಿಂದಲೇ ಹೊರಗಿಟ್ಟರು.

ಈ ಘಟನೆಯು ನಿರ್ದೇಶಕ ಕಮಲ್ ಅವರಿಗೆ ಭಾರಿ ಬೇಸರ ತಂದಿತ್ತಂತೆ. "ನನ್ನ ಇಡೀ ಸುದೀರ್ಘ ವೃತ್ತಿಜೀವನದಲ್ಲಿ ಇಂತಹ ಕೆಟ್ಟ ಅನುಭವ ಎದುರಾಗಿರಲಿಲ್ಲ. ಆನಿ (Annie) ಸೇರಿದಂತೆ ಎಷ್ಟೋ ಹೊಸ ಮುಖಗಳನ್ನು ನಾನು ಚಿತ್ರರಂಗಕ್ಕೆ ಪರಿಚಯಿಸಿದ್ದೇನೆ. ನನ್ನ ಯಾವ ಸಿನಿಮಾದಲ್ಲೂ ನಾಯಕ ನಟ ಅಥವಾ ನಿರ್ಮಾಪಕರು ನಾಯಕಿಯ ವಿಷಯದಲ್ಲಿ ಹೀಗೆ ಮಧ್ಯಪ್ರವೇಶಿಸಿರಲಿಲ್ಲ. ಆದರೆ ಯಾವುದೋ ಕಾರಣಕ್ಕೆ ಅವರು ಈ ಹುಡುಗಿಯಲ್ಲಿದ್ದ ಅಪಾರ ಸಾಮರ್ಥ್ಯವನ್ನು ಗುರುತಿಸಲು ಸೋತರು. ನಾಯಕಿಗೇ ಹೆಚ್ಚು ಪ್ರಾಮುಖ್ಯತೆ ಇರುವ ಹಾಗೂ ನಾಯಕನಿಗೆ ಸಣ್ಣ ಪಾತ್ರವಿರುವ ನನ್ನದೇ ಸ್ವಂತ ಸ್ಕ್ರಿಪ್ಟ್‌ನ ಸಿನಿಮಾ ಅದಾಗಿತ್ತು" ಎಂದು ಕಮಲ್ ತಮ್ಮ ಆಂತರಂಗದ ನೋವನ್ನು ತೋಡಿಕೊಂಡಿದ್ದಾರೆ.

Also Read
'ಕಾಂಚನಾ ಮತ್ತು ಕಾಂತಾರ ಸೇರಿಸಿದರೆ ಹುಟ್ಟಿಕೊಳ್ಳೋದೆ ಮೈಸಾ'; ರಶ್ಮಿಕಾ ನಟನೆಯ ಹೊಸ ಸಿನಿಮಾದ ಹಾಡು-ನೃತ್ಯಕ್ಕೆ ಹೆಚ್ಚಾಯ್ತು ಟೀಕೆ ..Rashmika Mandanna
Mamita Baiju

ಈ ಘಟನೆ ನಡೆದ ಕೇವಲ 3 ರಿಂದ 4 ತಿಂಗಳ ಅಂತರದಲ್ಲೇ ಮಮಿತಾ ಬೈಜು ಅಭಿನಯದ 'ಪ್ರೇಮಲು' ಸಿನಿಮಾ ತೆರೆಕಂಡು ಬ್ಲಾಕ್‌ಬಸ್ಟರ್ ಹಿಟ್ ಆಯಿತು. ಈ ಒಂದೇ ಸಿನಿಮಾದಿಂದ ಮಮಿತಾ ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ಮತ್ತು ಕೈಗೆ ಸಿಗದ ನಟಿಯಾಗಿ ಹೊರಹೊಮ್ಮಿದರು. "ಇಂದು ಮಮಿತಾ ತಲುಪಿರುವ ಎತ್ತರವನ್ನು ನೋಡಿ, ಆ ನಿರ್ಮಾಪಕ ಮತ್ತು ನಾಯಕ ನಟ ಖಂಡಿತಾ 'ಅಂದೇ ಮಮಿತಾ ಜತೆ ಆ ಸಿನಿಮಾ ಮಾಡಬೇಕಿತ್ತು' ಎಂದು ಪಶ್ಚಾತ್ತಾಪ ಪಡುತ್ತಿರಬಹುದು. ನಾಯಕಿಗೇ ಹೆಚ್ಚು ಸ್ಕ್ರೀನ್ ಸ್ಪೇಸ್ ಇದ್ದ ಆ ಅದ್ಭುತ ಕಥೆಯನ್ನು ಇಂದಿಗೂ ಸಿನಿಮಾ ಮಾಡಬೇಕು ಎಂಬ ಆಸೆ ನನಗಿದೆ" ಎಂದು ಹೇಳುವ ಮೂಲಕ ಕಮಲ್ ತಮ್ಮ ವರದಿಯನ್ನು ಮುಗಿಸಿದ್ದಾರೆ, (ಏಜೆನ್ಸೀಸ್).