

ಮೈಸಾ ಸಿನಿಮಾದ ಓ ಮೈಸಾ ರೇ ಹಾಡಿಗೆ ಟೀಕೆ-ಮೆಚ್ಚುಗೆ ವ್ಯಕ್ತ.
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹೊಸ ಅವತಾರಕ್ಕೆ ಫಿದಾ ಆದ ಫ್ಯಾನ್ಸ್.
ಡ್ಯಾನ್ಸ್ ಹೆಸರಲ್ಲಿ ರಶ್ಮಿಕಾ ಮಾಡ್ತಿರೋದಾದ್ರು ಏನು ಯಾರಾದ್ರು ಹೇಳಿ ಎಂದ ನೆಟ್ಟಿಗರು.
Rashmika Mandanna Mysaa: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಟನೆಯ 'ಮೈಸಾ' ಸಿನಿಮಾದ 'ಓ ಮೈಸಾ ರೇ' ಹಾಡು ರಿಲೀಸ್ ಆಗಿದೆ. ಹಾಡಿನಲ್ಲಿ ರಶ್ಮಿಕಾ ಪವರ್ಫುಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ದೇವಿಯ ಮುಂದೆ ರೌದ್ರ ನೃತ್ಯ ಮಾಡುವ ದೃಶ್ಯ ಗಮನ ಸೆಳೆಯುತ್ತಿದೆ. ಬಹುತೇಕ ಹಾಡನ್ನು ಕತ್ತಲಲ್ಲಿ, ಪಂಜು ಹಿಡಿದ ಬೆಳಕಿನಲ್ಲೇ ಚಿತ್ರೀಕರಿಸಲಾಗಿದೆ. ಒಂದೆಡೆ ರಶ್ಮಿಕಾ ರೌದ್ರಾವತಾರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ಇದೇನು ಡ್ಯಾನ್ಸ್..ಇವ್ರ ನೃತ್ಯಕ್ಕೆ ಆಸ್ಕರ್ ಕೊಡ್ಬೇಕು ಎಂದು ಟ್ರೋಲಿಗರು ಟೀಕಿಸುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆಗಿದ್ದಿದ್ದರೆ ಕಾಂತಾರದಲ್ಲಿ ಚಾನ್ಸ್ ಸಿಗ್ತಿತ್ತು ಎಂಬ ಮಾತುಗಳೂ ಕೇಳಿಬರುತ್ತಿವೆ.
ರವೀಂದ್ರ ಪುಲ್ಲೆ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಮೈಸಾ ಇದೇ ನ.27ರಂದು ಚಿತ್ರ ಮಂದಿರಲ್ಲಿ ಲಗ್ಗೆ ಇಡಲಿದೆ. ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯ ಈ ಚಿತ್ರವು ಗೋಂಡ್ ಬುಡಕಟ್ಟು ಸಮುದಾಯದ ಜೀವನ ಕತೆಯ ಸುತ್ತ ಕತೆ ಕಟ್ಟಲಾಗಿದೆ. ರಶ್ಮಿಕಾ ಅವರು ಮೈಸಾ ಎನ್ನುವ ಹೆಸರಲ್ಲಿ, ಬುಡಕಟ್ಟು ಜನಾಂಗದ ಧೈರ್ಯ ಶಾಲಿ ಹುಡುಗಿಯಾಗಿ ಮಿಂಚಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ 5 ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅನ್ ಫಾರ್ಮುಲಾ ಬ್ಯಾನರ್ ಅಡಿ ನಿರ್ಮಿಸಲಾಗಿದೆ.
ಓ ಮೈಸಾ ರೇ ಹಾಡು ಸೋಮವಾರ ರಿಲೀಸ್ ಆಗಿತ್ತು. ಇದರಲ್ಲಿ ದೇವರ ಮುಂದೆ ರಶ್ಮಿಕಾ ಕೆಂಪು ಸೀರೆಯುಟ್ಟು ಭರ್ಜರಿಯಾಗಿ ಕುಣಿದಿದ್ದಾರೆ. ಆದರೆ, ಹಾಡು ರಿಲೀಸ್ ಆದ 24 ಗಂಟೆಯಲ್ಲಿ ಪರ ಮತ್ತು ವಿರೋಧ ಚರ್ಚೆಗಳು ಮುನ್ನೆಲೆಗೆ ಬಂದಿದೆ. ಕೆಲವರು ರಶ್ಮಿಕಾ ಇದೇ ಮೊದಲ ಬಾರಿಗೆ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಎಂಥಾ ಎನರ್ಜಿ ಇದೆ ಎಂದು ಕೊಂಡಾಡಿದ್ದಾರೆ. ಲೇಡಿ ಸೂಪರ್ ಸ್ಟಾರ್ ರಶ್ಮಿಕಾ ಮಂದಣ್ಣ..ರಶ್ಮಿಕಾ ಮಂದಣ್ಣ ಅವರು ಹೀಗೆಲ್ಲ ನೃತ್ಯ ಮಾಡುತ್ತಾರೆ..ಇಷ್ಟು ಅಬ್ಬರಿಸುತ್ತಾರೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಮೆಚ್ಚಿಕೊಂಡಿದ್ದಾರೆ.
ಇನ್ನೊಂದು ವರ್ಗದ ಸಿನಿ ಪ್ರೇಮಿಗಳು ಹೀಗೆಂದಿದ್ದಾರೆ. 'ಅಲ್ಲ ರಶ್ಮಿಕಾ ಮಂದಣ್ಣ ನೃತ್ಯದ ಹೆಸರಲ್ಲಿ ಏನು ಮಾಡುತ್ತಿದ್ದಾರೆ. ಯಾರಾದರೂ ನನಗೆ ಹೇಳುತ್ತೀರಾ? ಎಂಥ ಕೆಟ್ಟ ನೃತ್ಯ. ಅವರ ನೃತ್ಯಕ್ಕೆ ಖಂಡಿತ ಆಸ್ಕರ್ ಪ್ರಶಸ್ತಿ ಕೊಡಬೇಕು' ಎಂದು ಎಕ್ಸ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ 'ಮೈಸಾ ಸಿನಿಮಾವು ಕಾಂಚನ ಮತ್ತು ಕಾಂತಾರದ ಮಿಕ್ಸ್ ವರ್ಷನ್ ಎನಿಸುತ್ತದೆ. ಇವರು ರಕ್ಷಿತ್ ಜೊತೆಗೆ ಚೆನ್ನಾಗಿದ್ದಿದ್ದರೆ...ಅಸಲು ಕಾಂತಾರದಲ್ಲಿ ನಟಿಸಲು ಚಾನ್ಸ್ ಸಿಕ್ತಿತ್ತು' ಎಂದು ಗೇಲಿ ಮಾಡಿದ್ದಾರೆ.
'ರಣಬಾಲಿ ಸಿನಿಮಾ ಫ್ಲಾಪ್ ಆಗಿದ್ದಕ್ಕೆ.. ವಿಜಯ್ ದೇವರಕೊಂಡ ಜೊತೆಗಿನ ಮುಂದಿನ ಭವಿಷ್ಯದಲ್ಲಾಗುವ ವೈಫಲ್ಯದ ಬಗ್ಗೆ ನೆನದು, ಹತಾಶೆ ವ್ಯಕ್ತಪಡಿಸುವಂತಿದೆ ಅವರ ಡ್ಯಾನ್ಸ್' ಎಂದು ಲೇವಡಿ ಮಾಡಿದ್ದಾರೆ. 'ಕಳೆದ ತಿಂಗಳು ಗಂಡ ಅತಿರೇಕವಾಗಿ ನಟಿಸಿದ್ದ. ಈ ತಿಂಗಳು ಹೆಂಡತಿ ಅತಿಯಾಗಿ ನಟಿಸಿದ್ದಾರೆ' ಎಂದು ಕಿಡಿಕಾರಿದರು. 'ಓವರ್ ಡ್ರಾಮ್ಯಾಟಿಕ್ ಆಗಿ ನಟಿಸುವುದು ತೆಲುಗು ಸಿನಿಮಾ ರಂಗದವರಿಗೆ ಅಭ್ಯಾಸ ಎಂದಿದ್ದಾರೆ, (ಏಜೆನ್ಸೀಸ್).