

ಅಂತಾರಾಷ್ಟ್ರೀಯ ಆರ್ಚೀಸ್ ಕಾಮಿಕ್ಸ್ ಸರಣಿಯನ್ನು ಆಧರಿಸಿ ಬಾಲಿವುಡ್ ನಿರ್ದೇಶಕಿ ಜೋಯಾ ಅಖ್ತರ್, ನೆಟ್ಫ್ಲಿಕ್ಸ್ಗಾಗಿ ಒಂದು ಚಿತ್ರ ಮಾಡುತ್ತಾರೆ ಎಂಬುದು ಹಳೆಯ ಸುದ್ದಿ. ಈ ಚಿತ್ರದ ಮೂಲಕ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ ನಂದ, ಶಾರೂಖ್ ಖಾನ್ ಮಗಳು ಸುಹಾನಾ ಖಾನ್ ಮತ್ತು ಶ್ರೀದೇವಿ ಮಗಳು ಖುಷಿ ಕಪೂರ್ ಬಾಲಿವುಡ್ಗೆ ಎಂಟ್ರಿ ಕೊಡುತ್ತಾರೆ ಎಂಬುದು ಸಹ ಹಳೆಯ ಸುದ್ದಿಯೇ. ಹೊಸ ಸುದ್ದಿಯೇನೆಂದರೆ, ಶನಿವಾರ ಚಿತ್ರದ ಮೊದಲ ನೋಟ ಬಿಡುಗಡೆಯಾಗಿದೆ.
ಹೌದು, ಚಿತ್ರದ ಬಗ್ಗೆ ಕಳೆದ ಎಂಟು ತಿಂಗಳುಗಳಿಂದ ಹಲವು ಸುದ್ದಿಗಳು ಕೇಳಿ ಬರುತ್ತಿದ್ದರೂ, ಚಿತ್ರ ಹೇಗಿರುತ್ತದೆ, ಹೊಸ ನಟ&ನಟಿಯರು ಹೇಗೆ ಕಾಣುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಈಗ ಅದು ಬಹಿರಂಗವಾಗಿದೆ. ಈ ಚಿತ್ರದಲ್ಲಿ ಅಗಸ, ಖುಷಿ ಮತ್ತು ಸುಹಾನಾ ಜತೆಗೆ ಮಿಹಿರ್ ಅಹುಜಾ, ವೇದಾಂಗ್ ರೈನಾ, ಯುವರಾಜ್ ಮೆಂಡ ಮತ್ತು ಡಾಟ್ ಸಹ ಸ್ನೇಹಿತರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 60ರ ದಶಕದ ಕಾಲಟದಲ್ಲಿ ಕಥೆ ನಡೆಯಲಿದ್ದು, ಮೊದಲ ಟೀಸರ್ ಸಹ ಬಿಡುಗಡೆಯಾಗಿದೆ. "ದಿ ಆರ್ಚೀಸ್' ಚಿತ್ರದ ಚಿತ್ರೀಕರಣ ಏಪ್ರಿಲ್ನಿಂದಲೇ ಪ್ರಾರಂಭವಾಗಿದ್ದು, ಮುಂದಿನ ವರ್ಷ ಚಿತ್ರ ಬಿಡುಗಡೆಯಾಗಲಿದೆ. ಆರ್ಚಿ ಪಾತ್ರದಲ್ಲಿ ಅಗಸ ನಟಿಸಿದರೆ, ವೆರೋನಿಕಾ ಮತ್ತು ಬೆಟ್ಟಿ ಪಾತ್ರಗಳಲ್ಲಿ ಕ್ರಮವಾಗಿ ಸುಹಾನಾ ಮತ್ತು ಖುಷಿ ನಟಿಸುತ್ತಿದ್ದಾರೆ.