

ಚೆನ್ನೈ: ಧಾರಾವಾಹಿ ನಟಿ ವಿ.ಜೆ. ಮಹಾಲಕ್ಷ್ಮೀ ಮತ್ತು ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರ್ ತಮ್ಮ ಪ್ರೇಮ ವಿವಾಹದಿಂದಲೇ ಭಾರಿ ಸುದ್ದಿಯಾಗಿದ್ದು ಎಲ್ಲರಿಗೂ ತಿಳಿದಿದೆ. ಅದಕ್ಕೆ ಕಾರಣ ಮಹಾಲಕ್ಷ್ಮೀ ಸೌಂದರ್ಯವತಿಯಾಗಿದ್ದು, ಆಕೆ ಮದುವೆ ಆಗಿರುವ ರವೀಂದರ್ ದಡೂತಿ ಮನುಷ್ಯ. ಹೀಗಾಗಿ ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೋಲ್ ಸಹ ಆಯಿತು. ಮಹಾಲಕ್ಷ್ಮೀ ಹಣಕ್ಕಾಗಿ ದಡೂತಿ ಮನಷ್ಯನನ್ನು ಮದುವೆಯಾಗಿದ್ದಾಳೆ ಎಂಬ ಟೀಕೆಗಳು ವ್ಯಕ್ತವಾದವು. ಆದರೆ, ಯಾವುದಕ್ಕೂ ಕ್ಯಾರೆ ಎನ್ನದೆ ಇಬ್ಬರ ಸಂತೋಷ ಜೀವನ ನಡೆಸುತ್ತಿದ್ದರು. ಆದರೆ, ರವೀಂದರ್ ಇತ್ತೀಚಗೆ ವಂಚನೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿ ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಚೆನ್ನೈ ಮೂಲದ ಬಾಲಾಜಿ ಗಾಬಾ ಎಂಬುವರು ಚೆನ್ನೈ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ರವೀಂದರ್ ಅವರನ್ನು ಬಂಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ಮಾತನಾಡಿರುವ ರವೀಂದರ್, ಜೈಲಿಗೆ ಹೋಗುವ ಪತ್ನಿ ಮಹಾಲಕ್ಷ್ಮಿ ಆಡಿದ ಮಾತನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಹೇಗೆ ಕೂರುತ್ತೀರಾ?
ಮಹಾಲಕ್ಷ್ಮಿ, ನನ್ನ ತಾಯಿಯ ಬಳಿಕ ನನಗೆ ಸಿಕ್ಕಿರುವ ವರ. ಯಾರೂ ಕೂಡ ನಮ್ಮಿಬ್ಬರನ್ನು ಬೇರೆ ಮಾಡಲು ಸಾಧ್ಯವಿಲ್ಲ. ವಂಚನೆ ಪ್ರಕರಣದಲ್ಲಿ ನನ್ನನ್ನು ಬಂಧಿಸಿ, ಪುಲ್ಹಾಲ್ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು. ಈ ವೇಳೆ ಮಹಾಲಕ್ಷ್ಮಿ, ಜೈಲಿನಲ್ಲಿ ನೀವು ಹೇಗೆ ಕುಳಿತುಕೊಳ್ಳುತ್ತೀರಾ ಕೇಳಿದಾಗ, ನಾನು ಅಕ್ಷರಶಃ ಕುಸಿದುಬಿಟ್ಟೆ ಎಂದು ಭಾವುಕರಾದರು.
ಇತರರ ದೇಹದಂತೆ ನನ್ನ ದೇಹ ನನಗೆ ಸ್ಪಂದಿಸುವುದಿಲ್ಲ. ನಾನು ಎಷ್ಟೇ ಹೇಳಿದರೂ ನನ್ನನ್ನು ಬಂಧಿಸಿ ಕರೆದೊಯ್ದರು. ನಾನು ಯಾವುದೇ ವಂಚನೆ ಮಾಡಿಲ್ಲ. ನನ್ನ ಮೇಲೆ ಸಾಕಷ್ಟು ಆರೋಪಗಳನ್ನು ಹೊರಿಸಿ ನನ್ನನ್ನು ವಂಚಿಸಲು ಯತ್ನಿಸುತ್ತಿದ್ದಾರೆ. ಇಂದಿನಿಂದ ನಾನು ಅವನನ್ನು (ಬಾಲಾಜಿ ಗಾಬಾ) ಸುಮ್ಮನೆ ಬಿಡುವುದಿಲ್ಲ ಎಂದು ರವೀಂದರ್ ಕಣ್ಣೀರಿಟ್ಟರು.
ಬಂಧನವಾಗಿದ್ದು ಏಕೆ?
ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಯೋಜನೆಯನ್ನು ಪುರಸಭೆಯಲ್ಲಿ ಪ್ರಾರಂಭಿಸುತ್ತೇವೆ ಆ ಯೋಜನೆಗೆ 200 ಕೋಟಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭವನ್ನು ಕಾಣಬಹುದೆಂದು ಹೇಳಿ ಬಾಲಾಜಿ ಗಾಬಾ ಅವರನ್ನು ರವೀಂದರ್ ನಂಬಿಸಿದ್ದರು ಎನ್ನಲಾಗಿದೆ. ಹಣದ ಆಸೆಗೆ ಬಿದ್ದ ಬಾಲಾಜಿ ಗಾಬಾ, ರವೀಂದರ್ ತೋರಿಸಿದ ದಾಖಲೆಗಳನ್ನು ನಂಬಿ 16 ಕೋಟಿ ರೂ. ವರೆಗೆ ಹೂಡಿಕೆ ಮಾಡಿದ್ದರು. ಹೇಳಿದ ಸಮಯಕ್ಕೆ ಯೋಜನೆ ಆರಂಭಿಸದಿದ್ದಾಗ ಬಾಲಾಜಿ ಗಾಬಾ ಅವರು ರವೀಂದರ್ ಬಳಿ ಹಣ ವಾಪಸ್ ಕೇಳಿದ್ದಾರೆ. ಆದರೆ, ಹಣವನ್ನು ಕೊಡಲು ಒಪ್ಪದ ರವೀಂದರ್ ಬೆದರಿಕೆ ಹಾಕಿದರು. ಅಲ್ಲದೆ, ಅವರು ನೀಡಿದ್ದ ನಾಲ್ಕು ಚೆಕ್ ಬೌನ್ಸ್ ಆಗಿದೆ ಎಂದು ಬಾಲಾಜಿ ಗಾಬಾ ಅವರು ನೀಡಿದ ದೂರಿನ ಆಧಾರದ ಮೇಲೆ ರವೀಂದರ್ರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.
ಮಹಾಲಕ್ಷ್ಮೀ ಮತ್ತು ರವಿಂದರ್ ಇಬ್ಬರು ತಿರುಪತಿಯಲ್ಲಿ ಕಳೆದ ವರ್ಷ ಸೆ.1ರಂದು ಮದುವೆ ಆದರು. ಇಬ್ಬರಿಗೂ ಇದು ಎರಡನೇ ಮದುವೆ ಆಗಿದ್ದು, ಮಹಾಬಲಿಪುರಂನಲ್ಲಿ ಇಬ್ಬರು ಹನಿಮೂನ್ ಆಚರಿಸಿದರು. ಮದುವೆ ಬೆನ್ನಲ್ಲೇ ನವದಂಪತಿ ಸನ್ ಟಿವಿಗೆ ಸಂದರ್ಶನ ನೀಡಿದ್ದರು. ಈ ವೇಳೆ ಹಣಕ್ಕಾಗಿ ಮದುವೆಯಾದ್ರಾ? ಎಂದು ಮಹಾಲಕ್ಷ್ಮೀ ಅವರನ್ನು ಪ್ರಶ್ನಿಸಲಾಗಿತ್ತು. ಏಕೆಂದರೆ, ಅನೇಕರ ಮನದಲ್ಲಿಯೂ ಇದೇ ಪ್ರಶ್ನೆ ಇದೆ. ಅಲ್ಲದೆ, ಕಾಮೆಂಟ್ಗಳಲ್ಲಿಯೂ ಹಣಕ್ಕಾಗಿಯೇ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಪ್ರಶ್ನೆಗೆ ಉತ್ತರ ನೀಡಿದ ಮಹಾಲಕ್ಷ್ಮೀ ನಾನು ಆರ್ಥಿಕವಾಗಿ ಸ್ವತಂತ್ರಳಾಗಿದ್ದಾನೆ ಮತ್ತು ನನ್ನ ಮಗನನ್ನು ನನ್ನದೇ ಹಣದಲ್ಲಿ ಬೆಳೆಸುವಷ್ಟು ಆರ್ಥಿಕವಾಗಿ ಸದೃಢಳಾಗಿದ್ದೇನೆ. ಮದುವೆ ಆಗದಿರಲು ಬಯಸಿದ್ದೇ ಆದರೆ, ರವೀಂದರ್ ಕೇಳಿದ ರೀತಿ ನನಗೆ ಇಷ್ಟವಾಯಿತು. ನೀವು ನನ್ನ ಪತ್ನಿಯಾಗುವಿರಾ? ಎಂದು ಮಸೇಜ್ ಮಾಡಿದರು. ಮಸೇಜ್ ನೋಡಿದ ಬಳಿಕ ತುಂಬಾ ಸಮಯ ತೆಗೆದುಕೊಂಡು, ಯೋಚಿಸಿ, ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದರು.
ಮಹಾಲಕ್ಷ್ಮೀ ಅವರು ಕಿರುತೆರೆ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಪ್ರಸ್ತುತ ಅವರು ನಟಿಸಿರುವ ಮಹಾರಸಿ ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. ರವೀಂದರ್ ಚಂದ್ರಶೇಖರನ್ ಅವರು ‘ನಟ್ಪುನ ಎನ್ನಡು ಥೆರಿಯುಮ’, ‘ಮುರುಂಗೈಕೈ ಚಿಪ್ಸ್’, ‘ವಿಡಿಯುಮ್ ವಾರೈ ಕಾಥಿರು’ ಮುಂತಾದ ಸಿನಿಮಾಗಳನ್ನು ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. (ಏಜೆನ್ಸೀಸ್)