ಥಿಯೇಟರ್​ ಬದಲು ಓಟಿಟಿಯಲ್ಲಿ ನಡೆಯಲಿದೆ ತನಿಖೆ ...

Thanike - Final
Published on

ಬೆಂಗಳೂರು: ೨೪ ವರ್ಷಗಳ ಹಿಂದೆ ತೆರೆಕಂಡು ಬಹಳ ಜನಪ್ರಿಯವಾದ ಚಿತ್ರವೆಂದರೆ ಅದು ಗುಲ್ಜಾರ್​ ಖಾನ್​ ಅಭಿನಯದ ಮತ್ತು ನಿರ್ದೇಶನದ 'ತನಿಖೆ'. ಈಗ ಅದೇ ಹೆಸರಿನಲ್ಲಿ ಹೊಸ ಕಥೆಯೊಂದಿಗೆ ಇನ್ನೊಂದು ಚಿತ್ರ ನಿರ್ಮಾಣವಾಗಿದ್ದು, ಈ ಚಿತ್ರ ನವೆಂಬರ್ 20ರಂದು ಬಿಡುಗಡೆಯಾಗಲಿದೆ.

ಈಗಾಗಲೇ ನವೆಂಬರ್​ 20ಕ್ಕೆ ಮಂಸೋರೆ ನಿರ್ದೇಶನದ 'ಆಕ್ಟ್​ 1978' ಚಿತ್ರವು ಬಿಡುಗಡೆಯಾಗುತ್ತಿದ್ದು, ಅದೇ ದಿನ ಇನ್ನೊಂದು ಚಿತ್ರ ಬಿಡುಗಡೆಯಾದರೆ ಸ್ಪರ್ಧೆ ಜೋರಾಗಬಹುದು ಎಂದನಿಸಬಹುದು. ಹಾಗೇನಿಲ್ಲ, ಈ 'ತನಿಖೆ' ಬಿಡುಗಡೆಯಾಗುತ್ತಿರುವುದು ಚಿತ್ರಮಂದಿರದಲ್ಲಲ್ಲ. ಓಟಿಟಿಯಲ್ಲಿ. ನಮ್ಮಫ್ಲಿಕ್ಸ್​ ಎಂಬ ಹೊಸ ಓಟಿಟಿಯಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ.

ಕರೋನಾ ಭಯದಿಂದ ಜನ ಇನ್ನೂ ಥಿಯೇಟರ್ ಕಡೆ ಬರುತ್ತಿಲ್ಲದಿರುವುದರಿಂದ, ಜನರ ಮನೆಗೇ ಚಿತ್ರವನ್ನು ತಲುಪಿಸುವ ನಿಟ್ಟಿನಲ್ಲಿ ಈ ಚಿತ್ರವನ್ನು ಚಿತ್ರಮಂದಿರಗಳ ಬದಲು ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡದವರು ಹೇಳಿಕೊಂಡಿದ್ದಾರೆ.

ಕನಕಪುರದಲ್ಲಿ ಬಹಳ ವರ್ಷಗಳ ಹಿಂದೆ ನಡೆದಂಥ ಸತ್ಯ ಘಟನೆಯೊಂದರ ಚಿಕ್ಕ ಎಳೆ ಇಟ್ಟುಕೊಂಡು 'ತನಿಖೆ' ಚಿತ್ರಕ್ಕೆ ಕಥೆ ಹೆಣೆಯಲಾಗಿದೆ. ಹಳ್ಳಿಯೊಂದರ ಆರು ಜನ ಸ್ನೇಹಿತರು ಹಾಗೂ ಒಬ್ಬ ಯುವತಿಯ ನಡುವೆ ನಡೆಯುವ ಕಥೆಯಿದು. ಅವರಲ್ಲೊಬ್ಬ ಸುಂದರ ಹುಡುಗಿಯನ್ನು ಪ್ರೀತಿಸುತ್ತಾನೆ. ಆದರೆ, ಆ ಯುವತಿಯು ಉಳಿದ ಐವರಲ್ಲಿ ಒಬ್ಬನನ್ನು ಪ್ರೀತಿಸುತ್ತಿರುತ್ತಾಳೆ. ಪ್ರೀತಿಯ ವಿಚಾರಕ್ಕೆ ಸ್ನೇಹಿತರಲ್ಲೇ ಮನಸ್ತಾಪ ಉಂಟಾಗುತ್ತದೆ. ಅದೇ ಸಮಯಕ್ಕೆ ಆ ಸ್ನೇಹಿತರಲ್ಲಿ ಒಬ್ಬನ ಕೊಲೆ ನಡೆದುಹೋಗುತ್ತದೆ. ಇದರಿಂದ ಉಳಿದ ಐವರು ಸ್ನೇಹಿತರು ಊರನ್ನೇ ಬಿಡುವಂತಾಗುತ್ತದೆ. ಅವರಲ್ಲಿ ಕೊಲೆಗಾರರು ಯಾರು ಎಂಬುದೇ ಈ ಚಿತ್ರದ ಕಥೆಯಂತೆ.

ಈ ಚಿತ್ರಕ್ಕೆ ಕಲಿಗೌಡ ಎನ್ನುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ಆರ್.ಡಿ. ಅನಿಲ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರು ಚಿತ್ರದ ನಿರ್ಮಾಪಕರೂ ಹೌದು. ಜತೆಗೆ ಚಂದನಾ, ಸಂತೋಷ್ ವಿಜಯಕುಮಾರ್, ಮಚ್ ಮುನಿರಾಜು, ಗುಲ್ಶನ್​, ನಿಖಿತ್, ರವಿ, ಕಲ್ಕೆರೆ ಗಂಗಾಧರ್, ಗೋಪಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮೈಸೂರು, ಪಾಂಡವಪುರ, ಕನಕಪುರ, ರಾಮನಗರ ಮತ್ತು ಚನ್ನಪಟ್ಟಣ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net