

‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಮೂಲಕ ಮೊದಲ ಬಾರಿಗೆ ಒಟ್ಟಿಗೆ ತೆರೆಹಂಚಿಕೊಂಡಿದ್ದ ಮೆಗಾಸ್ಟಾರ್ ಚಿರಂಜೀವಿ ಮತ್ತು ‘ಮಿಲ್ಕಿ ಬ್ಯೂಟಿ’ ತಮನ್ನಾ, ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಚಿರು ಜನ್ಮದಿನಕ್ಕೆ ಘೋಷಣೆ ಆಗಿದ್ದ ‘ಭೋಲಾ ಶಂಕರ್’ ಚಿತ್ರದಲ್ಲಿ ತಮನ್ನಾ ನಾಯಕಿಯಂತೆ.
ತಮಿಳಿನಲ್ಲಿ ತೆರೆಕಂಡು ಹಿಟ್ ಆಗಿದ್ದ ‘ವೇದಾಲಂ’ ಚಿತ್ರದ ರಿಮೇಕ್ ಇದಾಗಿದ್ದು, ಮೂಲ ಸಿನಿಮಾದಲ್ಲಿ ಶ್ರುತಿ ಹಾಸನ್ ಮಾಡಿದ್ದ ವಕೀಲೆ ಪಾತ್ರವನ್ನು ತೆಲುಗಿನಲ್ಲಿ ತಮನ್ನಾ ಮಾಡಲಿದ್ದಾರೆ. ಸದ್ಯ ಈ ವಿಚಾರ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದು, ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಈಗಾಗಲೇ, ಚಿತ್ರದ ಮೊದಲ ಲುಕ್ ರಿಲೀಸ್ ಆಗಿದ್ದು, ಚಿರಂಜೀವಿಗೆ ತಂಗಿಯ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಮೆಹೆರ್ ರಮೇಶ್ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಅನಿಲ್ ಸುಂಕರ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ಬಿಡುಗಡೆಗೆ ಸಿದ್ಧವಾದರೆ, ಮಲಯಾಳಂ ಹಿಟ್ ‘ಲೂಸಿಫರ್’ ಚಿತ್ರದ ರಿಮೇಕ್ ‘ಗಾಡ್ಫಾದರ್’ ಸಹ ಸೆಟ್ಟೇರಿದೆ. ಇತ್ತ, ‘ಪ್ಲಾನ್ ಎ ಪ್ಲಾನ್ ಬಿ’, ‘ಎಫ್ 3’, ‘ಗುರ್ತಂದಾ ಸೀತಾಕಲಂ’ ಸೇರಿ ಹಲವು ಸಿನಿಮಾಗಳಲ್ಲಿ ತಮನ್ನಾ ಬಿಜಿಯಾಗಿದ್ದಾರೆ. -ಏಜೆನ್ಸೀಸ್