

ಅಮೆರಿಕಾ: ತಮಿಳು ಚಿತ್ರರಂಗದ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣ್ ಅಭಿನಯದ ಬಹುನಿರೀಕ್ಷಿತ ಆಕ್ಷನ್, ಡ್ರಾಮಾ 'ಲಿಯೋ' ಚಿತ್ರದ ಮುಂಗಡ ಬುಕ್ಕಿಂಗ್ ಅಮೆರಿಕಾದಲ್ಲಿ ಈಗಾಗಲೇ ಪ್ರಾರಂಭವಾಗಿದ್ದು, ಕಳೆದ 24 ಗಂಟೆಯೊಳಗೆ ಬರೋಬ್ಬರಿ 10,000ಕ್ಕೂ ಅಧಿಕ ಟಿಕೆಟ್ ಖರೀದಿಯಾಗಿದೆ. ಸದ್ಯ ಈ ಸಂಗತಿ ದಳಪತಿ ಅಭಿಮಾನಿಗಳಿಗೆ ಭಾರೀ ಸಂತಸ ನೀಡಿದೆ.
ಕಳೆದ ಎರಡು ತಿಂಗಳಿನಿಂದ ವಿಜಯ್ ನಟನೆಯ 'ಲಿಯೋ' ಚಿತ್ರದ ಬಗ್ಗೆ ಅಭಿಮಾನಿಗಳು ಮತ್ತು ಸಿನಿಪ್ರೇಕ್ಷಕರು ಹೊಸ ಅಪ್ಡೇಟ್ಗಾಗಿ ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದರು. ಅದರಂತೆಯೇ ಇತ್ತೀಚೆಗಷ್ಟೇ ಚಿತ್ರತಂಡ ರಿಲೀಸ್ ದಿನಾಂಕವನ್ನು ಘೋಷಿಸಿದ್ದು, ಚಿತ್ರವು ಇದೇ ಅಕ್ಟೋಬರ್ 19 ರಂದು ಅಧಿಕೃತವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಸದ್ಯ ಯುಎಸ್ ಮುಂಗಡ ಬುಕ್ಕಿಂಗ್ಸ್ನಲ್ಲಿ ಹೊಸ ಮೈಲಿಗಲ್ಲು ಸಾಧಿಸಲು ಕಾರಣರಾದ ಟಿಕೆಟ್ ಖರೀದಿದಾರರಿಗೆ ಚಿತ್ರತಂಡ ಧನ್ಯವಾದ ತಿಳಿಸಿದೆ.
ಚಿತ್ರವು ಕಳೆದ 24 ಗಂಟೆಗಳಲ್ಲಿ 10,000ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಅಮೆರಿಕಾದಲ್ಲಿ ಮಾರಾಟ ಮಾಡಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ನಿರ್ದೇಶಕ ಲೋಕೇಶ್ ಕನಕರಾಜ್, ಟಿಕೆಟ್ ಖರೀದಿ ಮಾಡುವ ಮುಖೇನ ಸಿನಿಮಾ ಮತ್ತು ದಳಪತಿ ವಿಜಯ್ ಅವರ ಮೇಲಿಟ್ಟಿರುವ ಪ್ರೀತಿಗೆ ಧನ್ಯವಾದ ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಸದ್ಯ 'ಲಿಯೋ' ಬಗ್ಗೆ ಇದೀಗ ಸಾಕಷ್ಟು ನಿರೀಕ್ಷೆಗಳು ಮೂಡಿದ್ದು, ಭಾರತೀಯ ಚಿತ್ರರಂಗದಲ್ಲಿ ವಿಜಯ್ ಸಿನಿಮಾ ಹೊಸ ದಾಖಲೆ ಬರೆಯಲಿದೆ,(ಏಜೆನ್ಸೀಸ್)