'ಜನ ನಾಯಗನ್'​ ಟೈಟಲ್​ ಕಾರ್ಡ್​ನಲ್ಲಿ ವಿಜಯ್​ ಹೆಸರು ನಾವು ಕೇಳಿದಂತೆಯೇ ಇರ್ಬೆಕು: ದಳಪತಿ ಫ್ಯಾನ್ಸ್ ಪಟ್ಟು ​

ಜನ ನಾಯಗನ್​ ಸಿನಿಮಾ
ಜನ ನಾಯಗನ್​ ಸಿನಿಮಾ
Published on

ಪ್ರಮುಖ ಮುಖ್ಯಾಂಶಗಳು

  • ಜನ ನಾಯಗನ್​ಗೆ ಶುಭಕೋರಿದ ಕೆವಿಎನ್​ ಸಂಸ್ಥೆ, ಚಿತ್ರದ ನಿರ್ಮಾಪಕರು
  • ರಿಲೀಸ್​ಗೆ ಪರದಾಡುತ್ತಿದ್ದ ಬಹುನಿರೀಕ್ಷಿತ ಚಿತ್ರದ ರಿಲೀಸ್​ಗೆ ಶೀಘ್ರವೇ ಮಹೂರ್ತ
  • ಸಿನಿಮಾದ ಟೈಟಲ್​ ಕಾರ್ಡ್​ನಲ್ಲಿ ವಿಜಯ್​ ಹೆಸರು ಬದಲಿಸಿ
Jana Nayagan: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ, ಎಐಡಿಎಂಕೆಯಂತಹ ಘಟಾನುಘಟಿ ಪಕ್ಷಗಳನ್ನೇ ಮಣಿಸಿ, ರಾಜ್ಯದ 234 ಸ್ಥಾನಗಳಲ್ಲಿ 100ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದ ನಟ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್​ಗೆ ಸದ್ಯ ದೇಶವ್ಯಾಪಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಮತ್ತೊಂದೆಡೆ, ತಮಿಳಿನ ಜನ ನಾಯಗನ್​ ರಿಲೀಸ್​ಗೆ ಶೀಘ್ರವೇ ಅಧಿಕೃತ ಮಹೂರ್ತ ಫಿಕ್ಸ್ ಆಗಲಿದ್ದು, ಈ ಬಾರಿ ಯಾವುದೇ ಬದಲಾವಣೆ ಅಥವಾ ಮುಂದೂಡಿಕೆ ಇರುವುದಿಲ್ಲ ಎಂಬುದಂತು ಖಚಿತ.
ತನ್ನ ಚೊಚ್ಚಲ ರಾಜಕೀಯ ಪ್ರವೇಶದಲ್ಲಿಯೇ ತಮಿಳುನಾಡಿನ ಜನತೆಯಿಂದ ಅಭೂತಪೂರ್ವ ಬೆಂಬಲ ಪಡೆದ ವಿಜಯ್​ಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ಮಧ್ಯೆ, ವಿಜಯ್​ ಅಭಿನಯದ ಕೊನೆ ಸಿನಿಮಾ ಜನ ನಾಯಗನ್‌ ನಿರ್ಮಾಪಕರಾದ ವೆಂಕಟ್ ಕೆ. ನಾರಾಯಣ ಅವರು ನಟನಿಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಅವರ ಮುಂದಿನ ರಾಜಕೀಯ ಪಯಣಕ್ಕೆ ಶುಭಕೋರಿದ್ದಾರೆ.
ಈ ವರ್ಷದ ಜ.09ರಂದೇ ತೆರೆಗೆ ಬರಬೇಕಿದ್ದ ವಿಜಯ್​ ಚಿತ್ರಕ್ಕೆ ಸಾಕಷ್ಟು ಅಡಚಣೆಗಳು ಉಂಟಾಯಿತು. ಸೆನ್ಸಾರ್​ ಮಂಡಳಿ ತಡೆಗೆ ಚಿತ್ರತಂಡ ಕೋರ್ಟ್​ ಮೆಟ್ಟಿಲೇರಿದ್ದ ತಡ, ಅಂದಿನಿಂದ ಇಂದಿನವರೆಗೂ ಚಿತ್ರದ ಬಗ್ಗೆ ಒಂದೇ ಒಂದು ಸುದ್ದಿಯೂ ಇಲ್ಲ. ಚುನಾವಣೆ ಇದ್ದ ಕಾರಣ, ತಾತ್ಕಾಲಿಕವಾಗಿ ಸಿನಿಮಾ ರಿಲೀಸ್​ ಮುಂದೂಡಿಕೆ ಆಗಿತ್ತು. ಆದರೆ, ಇಂತಹ ದಿನ ಎಂದು ಅಧಿಕೃತವಾಗಿ ಚಿತ್ರತಂಡಕ್ಕೆ ನಿರ್ಧರಿಸಲು ಸಾಧ್ಯವಾಗಿರಲಿಲ್ಲ. ಕಾರಣ, ಸೆನ್ಸಾರ್​ ಮಂಡಳಿ ತಂದಿಟ್ಟಿದ್ದ ಪಜೀತಿ. ಆದರೀಗ, ಆಗೋದೆಲ್ಲ ಒಳ್ಳೆಯದಕ್ಕೆ ಎನ್ನುವಂತೆ ವಿಜಯ್ ಗೆಲುವಿನ ಬಳಿಕವೇ ಸಿನಿಮಾ ತೆರೆಗೆ ಬರಲಿದ್ದು, ಫ್ಯಾನ್ಸ್​ಗಳಲ್ಲಿ ನಟನ ಕ್ರೇಜ್​ ದುಪ್ಪಟ್ಟಾಗಿದೆ.
ಕೆವಿಎನ್​ ನಿರ್ಮಾಣ ಸಂಸ್ಥೆಯಿಂದ ನಿರ್ಮಾಪಕರು, ಹೃದಯತುಂಬಿದ ಅಭಿನಂದನೆಗಳು ನಮ್ಮ ಜನ ನಾಯಗನ್​ ದಳಪತಿ ವಿಜಯ್ ಸರ್​ ಎಂದು ಟ್ವೀಟ್​ ಮಾಡಿದರು. ಇದನ್ನು ನೋಡ್ತಿದ್ದಂತೆ ತಮ್ಮ ಆಸೆಯನ್ನು ವ್ಯಕ್ತಪಡಿಸಿದ ವಿಜಯ್ ಫ್ಯಾನ್ಸ್​, ಸಿನಿಮಾ ನೋಡಲು ನಾವು ತುಂಬಾ ಉತ್ಸುಕರಾಗಿದ್ದೇವೆ. ದಯವಿಟ್ಟು ಟೈಟಲ್​ ಕಾರ್ಡ್​ನಲ್ಲಿ ಅವರ ಹೆಸರನ್ನು ಬದಲಿಸಿ ಎಂದು ಒತ್ತಾಯಿಸಿದ್ದಾರೆ.
ಅನೇಕ ವಿಜಯ್​ ಅಭಿಮಾನಿಗಳು ಮತ್ತು ಬೆಂಬಲಿಗರು ಇದಕ್ಕೆ ಪ್ರತಿಕ್ರಿಯಿಸಿದ್ದು, ಸಿನಿಮಾದ ಟೈಟಲ್ ಕಾರ್ಡ್​ನಲ್ಲಿ ದಳಪತಿ ವಿಜಯ್​ ಅಲ್ಲ, ಸಿಎಂ ದಳಪತಿ ವಿಜಯ್​ ಎಂದು ಬದಲಿಸಿ. ಒಬ್ಬ ಲೀಡರ್​ನನ್ನು ಘೋಷಿಸಿಲ್ಲ, ಜನರೇ ಅವರನ್ನು ಆಯ್ಕೆ ತಮ್ಮ ನಾಯಕನಾಗಿ ಆಯ್ಕೆ ಮಾಡಿದ್ದಾರೆ ಎಂಬ ಹಲವು ಕಾಮೆಂಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಅಭಿಮಾನಿಗಳ ಆಗ್ರಹಕ್ಕೆ ಜನ ನಾಯಗನ್​ ನಿರ್ದೇಶಕರು ಮತ್ತು ನಿರ್ಮಾಪಕರು ಟೈಟಲ್​ ಕಾರ್ಡ್​ನಲ್ಲಿ ಹೆಸರು ಬದಲಿಸುತ್ತಾರೋ? ಇಲ್ಲವೋ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net