

ಚೆನ್ನೈ: ನೆಚ್ಚಿನ ಹೀರೋ ಏನೇ ಮಾಡಿದರೂ ಅಭಿಮಾನಿಗಳು ಅದನ್ನು ತಲೆ ಮೇಲೆ ಹೊತ್ತು ತಿರುಗುತ್ತಾರೆ. ಮೈ ತುಂಬ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಾರೆ. ಇದು ಒಂದು ಬದಿಯಾದರೆ, ಮತ್ತೊಂದು ಕಡೆ, ಬೇರೆ ಸ್ಟಾರ್ಗಳನ್ನು ಕಂಡರೆ ಒಂದಷ್ಟು ಮುನಿಸು ಸಹಜ. ಅದು ಆಗಾಗ ಜಾಲತಾಣದಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ, ಇದೀಗ ತಮಿಳುನಾಡಿನಲ್ಲಿ ನಡೆದ ಘಟನೆಯೊಂದು ಓರ್ವನ ಸಾವಿನಲ್ಲಿ ಅಂತ್ಯವಾಗಿದೆ!
ಹೌದು, ದಳಪತಿ ವಿಜಯ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಕಿತ್ತಾಟದಲ್ಲಿ ವಿಜಯ್ ಅಭಿಮಾನಿ ಸಾವನ್ನಪ್ಪಿದ್ದಾನೆ. ಇದಕ್ಕೆ ಕಾರಣವಾಗಿದ್ದು, ಈ ಸ್ಟಾರ್ ನಟರು ಕರೊನಾ ಹಿನ್ನೆಲೆಯಲ್ಲಿ ಸರ್ಕಾರಗಳಿಗೆ ನೀಡಿದ ದೇಣಿಗೆ! ಹೌದು ರಜನಿಕಾಂತ್ ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಕೋಟಿಗಟ್ಟಿಲೆ ಪರಿಹಾರದ ರೂಪದಲ್ಲಿ ದೇಣಿಗೆ ನೀಡಿದ್ದಾರೆ. ಇತ್ತ ವಿಜಯ್ ತಮ್ಮ ಕೈಲಾದಷ್ಟು ಮೊತ್ತವನ್ನು ನೀಡಿದ್ದಾರೆ. ಈ ವಿಚಾರ ರಜನಿ ಅಭಿಮಾನಿಗೆ ಗೊತ್ತಾಗಿದ್ದೇ ತಡ, ನಿಮ್ಮ ಹೀರೋ ಕಡಿಮೆ ದೇಣೀಗೆ ಕೊಟ್ಟಿದ್ದಾರೆ ಎಂದು ವಿಜಯ್ ಅಭಿಮಾನಿಯನ್ನು ಅಣುಕಿಸಿದ್ದಾನೆ. ನಿಮ್ಮ ಹೀರೋನೇ ಕಡಿಮೆ ಮೊತ್ತ ನೀಡಿದ್ದು ಎಂದು ಮಾತಿಗೆ ಮಾತು ಬೆಳೆದಿದೆ. ಇಬ್ಬರೂ ಪಕ್ಕದ ಮನೆಯವರಾದರೂ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ. ಕೊನೆಗೆ 22 ವರ್ಷದ ಯುವರಾಜ್ ಸಾವಿಗೀಡಾಗಿದ್ದು, ಕೊಲೆ ಆರೋಪಿ ದಿನೇಶ್ ಬಾಬುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಂದಹಾಗೆ, ಸಿಎಂ ಪರಿಹಾರ ನಿಧಿಗೆ ವಿಜಯ್ 1ಕೋಟಿ 30ಲಕ್ಷ ದೇಣಿಗೆ ನೀಡಿದರೆ, ರಜನಿಕಾಂತ್ ಸಿನಿಮಾ ಕಾರ್ಮಿಕರಿಗೆ 50 ಲಕ್ಷ ನೀಡಿದ್ದಾರೆ. ಸಹಜವಾಗಿ ಈ ರೀತಿಯ ಫ್ಯಾನ್ಸ್ ವಾರ್ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಘಟಿಸುತ್ತವೆ. ಆದರೆ, ಇದೀಗ ಅದು ಕರೊನಾ ಹೊತ್ತಲ್ಲಿ ನಡೆದಿರುವುದು ವಿಪರ್ಯಾಸ. (ಏಜೆನ್ಸೀಸ್)