ಚೆನೈ: ಸಮಾಜ ಸೇವೆ ಮಾಡಲು ತಮಿಳು ನಟರು ಸದಾ ಮುಂದೆ ಇರುತ್ತಾರೆ. ಎಂಜಿಆರ್, ರಜನಿಕಾಂತ್ ರಿಂದ ಹಿಡಿದು ಇಂದಿನ ಬಹುತೇಕ ಎಲ್ಲಾ ತಮಿಳು ಸ್ಟಾರ್ ನಟರದ್ದು ಕೊಡು ಗೈ ಎಂದೇ ಹೇಳಬೇಕು. ದಳಪತಿ ವಿಜಯ್ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಜನಸಾಮಾನ್ಯರಿಗೆ ಅನೇಕ ರೀತಿಗಳಲ್ಲಿ ಸಹಾಯ ಮಾಡಿಕೊಂಡು ಬಂದಿದ್ದಾರೆ. ಆದರೆ, ಈ ಬಾರಿ ಅವರ ಒಂದು ಕೆಲಸದಿಂದ ಇಡೀ ದೇಶದ ಗಮನ ಸೆಳೆಯುತ್ತಿದ್ದಾರೆ. ಹೌದು, ನಟ ವಿಜಯ್ ತಮ್ಮ ಅಭಿಮಾನಿಗಳ ಸಂಘ 'ವಿಜಯ್ ಮಕ್ಕಳ್ ಇಯಕ್ಕಂ' ಮೂಲಕ ನಿರ್ಗತಿಕರಿಗೆ, ಬಡವರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಆದರೆ, ಇದೀಗ ದಳಪತಿ ವಿಜಯ್ ನಿರ್ಗತಿಕರಿಗೆ, ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಶಾಲೆಯೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಈ ಕುರಿತ ಸುದ್ದಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿವೆ. ವಿಜಯ್ ಚೆನೈನ ತಿರುಪೋರೂರಿನಲ್ಲಿ ಶಾಲೆಯನ್ನು ನಿರ್ಮಿಸುತ್ತಿದ್ದಾರೆ ಎನ್ನಲಾಗಿದೆ. ಶ್ರೀಘ್ರದಲ್ಲೇ ವಿಜಯ್ ಅವರು ಈ ಕುರಿತು ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಿದ್ದಾರಂತೆ. ತಮ್ಮ ಉಚಿತ ಹೋಟೆಲ್ ಮೂಲಕ ಬಡವರಿಗೆ ಊಟವನ್ನು ಕೊಡಿಸುತ್ತಿರುವ ನಟ ವಿಜಯ್, ಈಗ ಉಚಿತವಾಗಿ ಶಿಕ್ಷಣ ಕೊಡಲು ಸಹ ಮುಂದಾಗಿದ್ದಾರೆ. ಇದಕ್ಕೆ, ನಟನ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.