

ಬೆಂಗಳೂರು: 2017ರಲ್ಲಿ ತೆಲುಗಿನಲ್ಲಿ ತೆರೆಕಂಡ ‘ಗುಂಟುರೋಡು’ ಸಿನಿಮಾದಲ್ಲಿ ನಟಿಸಿದ್ದ ನಟ ಮಂಚು ಮನೋಜ್, ಅದಾದ ಬಳಿಕ ಸಿನಿಮಾದಿಂದ ಕೊಂಚ ದೂರವೇ ಉಳಿದಿದ್ದರು. ಕಥೆ ಆಯ್ಕೆಯಲ್ಲಿ ಹೊಸದನ್ನೇ ಬಯಸುತ್ತ ಸುದೀರ್ಘ ಮೂರು ವರ್ಷ ಕಳೆದರು. ಈಗ ನಾನೇ ಎಲ್ಲ ಅಂದುಕೊಂಡು ಮತ್ತೆ ಬಂದಿದ್ದಾರೆ! ಅಂದರೆ, ‘ಅಹಂ ಬ್ರಹ್ಮಾಸ್ಮಿ’ ಸಿನಿಮಾ ಮೂಲಕ ಕಮ್್ಯಾಕ್ ಮಾಡುತ್ತಿದ್ದಾರೆ.
ವಿಶೇಷ ಏನೆಂದರೆ ಈ ಸಿನಿಮಾ ಒಂದಲ್ಲ ಎರಡಲ್ಲ ಒಟ್ಟು ಐದು ಭಾಷೆಗಳಲ್ಲಿ ತೆರೆಕಾಣಲಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲೂ ಸಿದ್ಧವಾಗಲಿದೆ. ಸದ್ಯ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುತ್ತಿದೆ. ಶ್ರೀಕಾಂತ್ ರೆಡ್ಡಿ ನಿರ್ದೇಶನದ ಜವಾಬ್ದಾರಿ ಹೊತ್ತರೆ, ನಿರ್ಮಲಾ ದೇವಿ ಮತ್ತು ಮಂಚು ಮನೋಜ್ ‘ಎಂಎಂ ಆರ್ಟ್ಸ್’ ಬ್ಯಾನರ್ನಲ್ಲಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಚಿತ್ರತಂಡ, ಮಾರ್ಚ್ 6ಕ್ಕೆ ಚಿತ್ರಕ್ಕೆ ಚಾಲನೆ ನೀಡಲಿದೆ.