ನಿಮಗೆ ಸ್ವಲ್ಪವೂ ನಾಚಿಕೆ ಆಗಲ್ವಾ? ಸೆಲೆಬ್ರಿಟಿಗಳಿಗೆ ಟೀಮ್​ ಕಂಗನಾ ಪ್ರಶ್ನೆ

Kangana Ranaut - Final
Published on

ಕಂಗನಾ ರಣಾವತ್​ ಅಕ್ಷರಶಃ ರೊಚ್ಚಿಗೆದ್ದಿದ್ದಾರೆ. ಅದರಲ್ಲೂ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ ಅವರು ಬಾಲಿವುಡ್​ ಮಂದಿಯನ್ನು ಹಿಗ್ಗಾಮುಗ್ಗಾ ಬೈತಿದ್ದಾರೆ. ಅದಕ್ಕೆ ಕಾರಣ, ಚಿತ್ರರಂಗದಲ್ಲಿರುವ ಸ್ವಜನಪಕ್ಷಪಾತ. ಈಗಾಗಲೇ ಅವರು ಹಲವು ಬಾರಿ, ಈ ವಿಷಯದ ಕುರಿತು ಮಾತನಾಡಿದ್ದಾರೆ. ಈಗ ಅವರಿಗೆ ಇನ್ನೊಂದು ಕಾರಣ ಸಿಕ್ಕಿದೆ.

ಈ ಬಾರಿ ಅವರಿಗೆ ಅಂಥದ್ದೊಂದು ಅವಕಾಶ ಕೊಟ್ಟಿರುವುದು ಆಲಿಯಾ ಭಟ್​. ಆಲಿಯಾ ಬಗ್ಗೆ ಕೆಂಡಕಾರುತ್ತಲೇ ಇರುವ ಕಂಗನಾ ಮತ್ತು ಅವರು ಪ್ರಚಾರ ತಂಡಕ್ಕೆ ಇನ್ನೊಂದು ಅವಕಾಶ ಸಿಕ್ಕಿದೆ. ಇಷ್ಟಕ್ಕೂ ಆಗಿದ್ದೇನೆಂದರೆ, ಆಲಿಯಾ, ತಮ್ಮ ಬಾಲ್ಯದ ಫೋಟೋವೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಅದರಲ್ಲಿ ತಪ್ಪೇನು? ಎಂಬ ಪ್ರಶ್ನೆ ಬರಬಹುದು. ತಪ್ಪೇನಿಲ್ಲ. ಎಲ್ಲಾ ಸೆಲೆಬ್ರಿಟಿಗಳು ಥ್ರೋಬ್ಯಾಕ್​ ಹೆಸರಿನಲ್ಲಿ ಆಗಾಗ ತಮ್ಮ ಬಾಲ್ಯದ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಾಕಿಕೊಳ್ಳುತ್ತಲೇ ಇರುತ್ತಾರೆ.

ತಪ್ಪಾಗಿರುವುದು, ಕೆಲವರು ಈ ಫೋಟೋಗಳಿಗೆ ಲೈಕ್​ ಒತ್ತಿರುವಾಗ. ಆಲಿಯಾ ಅವರ ಬಾಲ್ಯದ ಫೋಟೋ ನೋಡಿ, ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೀಪಿಕಾ ಪಡುಕೋಣೆ, ಹೃತಿಕ್​ ರೋಶನ್​, ರಣವೀರ್​ ಸಿಂಗ್​, ಜೋಯಾ ಅಖ್ತರ್​, ಬಿಪಾಶಾ ಬಸು, ಅದಿತಿ ರಾವ್​ ಹೈದರಿ ಸೇರಿದಂತೆ ಹಲವರು ಈ ಫೋಟೋದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೆಲ್ಲವನ್ನೂ ಶೇರ್​ ಮಾಡಿಕೊಂಡಿರುವ ಟೀಮ್​ ಕಂಗನಾ, ಸೆಲೆಬ್ರಿಟಿಗಳಿಗೆ ಹಿಗ್ಗಾಮುಗ್ಗಾ ಝಾಡಿಸಿದೆ. 'ಅಲ್ಲಾ ಈ ಬಾಲಿವುಡ್​ ಸೆಲೆಬ್ರಿಟಿಗಳಿಗೆ ಏನಾಗಿದೆ ನೋಡಿ. ಒಂದು ಕಡೆ ಸುಶಾಂತ್​ ಸಾವಿಗೆ ಇಡೀ ದೇಶ ಮರಗುತ್ತಿದ್ದರೆ, ಕೆಲವರು ಮಾತ್ರ ಆಲಿಯಾಳ ಬಾಲ್ಯದ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸುಶಾಂತ್​ ಕುಟುಂಬ ಮತ್ತು ದೇಶದ ಜನತೆ ದುಃಖದಲ್ಲಿರುವಾಗ ಕ್ಯಾರೇ ಎನ್ನದವರೆಲ್ಲಾ ಇದೀಗ ಹೀಗೆ ಮಾಡುತ್ತಿರುವುದಕ್ಕೆ ಏನನ್ನಬೇಕು' ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಇನ್ನಷ್ಟು ಬರೆದಿರುವ ಟೀಮ್​ ಕಂಗನಾ, 'ಇದು ಅವರವರ ದೃಷ್ಟಿಕೋನಕ್ಕೆ ಬಿಟ್ಟಿದ್ದು. ಸುಶಾಂತ್​ ಸತ್ತಾಗ, ಅವರಿಗೆ ನ್ಯಾಯ ಕೊಡಿಸುವುದಕ್ಕೆ ಯಾರೊಬ್ಬರೂ ಮುಂದಾಗಲಿಲ್ಲ. ಅದೇ ಈ ಹುಡುಗಿ ಒಂದು ಫೋಟೋ ಶೇರ್​ ಮಾಡಿದಾಗ, ಚಿತ್ರರಂಗದವರೆಲ್ಲಾ ಚಪ್ಪಾಳೆ ಹೊಡೆಯುವುದಕ್ಕೆ ಮುಂದೆ ಬಂದಿದ್ದಾರೆ. ಇದಕ್ಕೆಲ್ಲಾ ಏನನ್ನಬೇಕು? ಇವರಿಗೆ ಸ್ವಲ್ಪವೂ ನಾಚಿಕೆ ಆಗೋದಿಲ್ವೇ' ಎಂದು ಟೀಂ ಕಂಗನಾ ಪ್ರಶ್ನಿಸಿದೆ.

ಆದರೆ, ಇದ್ಯಾವುದಕ್ಕೂ ಬಾಲಿವುಡ್​ ಸೆಲೆಬ್ರಿಟಿಗಳು ಸದ್ಯಕ್ಕೆ ಉತ್ತರ ನೀಡಿಲ್ಲ. ಮುಂದೆ ಈ ವಿಷಯ ಯಾವ ತಿರುವು ಪಡೆದುಕೊಳ್ಳುತ್ತದೋ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net