

ಬೆಂಗಳೂರು: ಚಂದನವನಕ್ಕೆ ತುಂಬ ದಿನಗಳ ಬಳಿಕ ‘ಯಲ್ಲೋ ಬೋರ್ಡ್’ ಹಿಡಿದು ಬರುತ್ತಿದ್ದಾರೆ ನಟ ಪ್ರದೀಪ್ ಬೋಗಾದಿ ಮತ್ತು ನಟಿ ಅಹಲ್ಯಾ ಸುರೇಶ್. 2017ರಲ್ಲಿ ‘ಟೈಗರ್’ ಸಿನಿಮಾ ಬಿಟ್ಟರೆ, ಅಲ್ಲಿಂದ ಇಲ್ಲಿಯವರೆಗೂ ಪ್ರದೀಪ್ ಬೇರೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿರ ಲಿಲ್ಲ. ಅದೇ ರೀತಿ 2019ರಲ್ಲಿ ತೆರೆಕಂಡ ‘ಮಾರ್ಗರೇಟ್’, ಅಹಲ್ಯಾ ಅಭಿನಯದ ಕೊನೇ ಸಿನಿಮಾ. ಈಗ ಒಟ್ಟಿಗೆ ‘ಯಲ್ಲೋ ಬೋರ್ಡ್’ ಮೂಲಕ ಆಗಮಿಸಿದ್ದಾರೆ. ತ್ರಿಲೋಕ್ ರೆಡ್ಡಿ ನಿರ್ದೇಶನದಲ್ಲಿ ಸಿದ್ಧವಾಗಿರುವ ‘ಯಲ್ಲೋ ಬೋರ್ಡ್’ ಚಿತ್ರಕ್ಕೆ ವಿಂಟೇಜ್ ಫಿಲಂಸ್ ಬಂಡವಾಳ ಹೂಡಿದೆ.
ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರದ ಟೀಸರ್ ಮತ್ತು ಹಾಡು ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿಯೇ ಬಹುತೇಕ ಶೂಟಿಂಗ್ ಮುಗಿಸಿರುವ ಈ ಚಿತ್ರದಲ್ಲಿ ಪ್ರದೀಪ್ ಟ್ಯಾಕ್ಸಿ ಡ್ರೖೆವರ್ ಪಾತ್ರ ಮಾಡಿದ್ದಾರೆ. ನಾಯಕಿ ಅಹಲ್ಯಾಗೆ ಇಲ್ಲಿ ಎರಡು ಶೇಡ್ಗಳಿವೆಯಂತೆ. ಸ್ನೇಹಾ ಚಿತ್ರದ ಮತ್ತೋರ್ವ ನಾಯಕಿ. ಶ್ರೀನಿವಾಸ್, ಅಶ್ವಿನ್, ಭವಾನಿ ಪ್ರಕಾಶ್, ಚಂದನಾ, ಅಮಿತ್ ಇನ್ನುಳಿದ ಪಾತ್ರವರ್ಗದಲ್ಲಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿದ್ದು, ಅದ್ವಿಕ್ ಸಂಗೀತ ನೀಡಿದ್ದಾರೆ. ಪ್ರವೀಣ್ ಎಸ್ ಛಾಯಾಗ್ರಹಣ, ಗಿರಿ ಮಹೇಶ್ ಸಂಕಲನ ಮಾಡಿದ್ದಾರೆ.