ತತ್ಸಮ ತದ್ಭವ ಹೀಗೊಂದು ಸ್ಪರ್ಧೆ; ದೂರಿ ಲಾಲಿ ಹಾಡಿಗೆ ವಿಡಿಯೋ ಮಾಡಿ, ಮೇಘನಾ ರಾಜ್ ಭೇಟಿಯಾಗಿ

tatsama tadbhava
Published on

ಬೆಂಗಳೂರು: ಮೇಘನಾ ರಾಜ್ ಕಮ್‌ಬ್ಯಾಕ್ ಮಾಡಿರುವ ಸಿನಿಮಾ ‘ತತ್ಸಮ ತದ್ಭವ’. ಅವರನ್ನು ಮತ್ತೆ ಚಿತ್ರರಂಗಕ್ಕೆ ಕರೆತರಲು ಗೆಳೆಯರ ಬಳಗ ಸಾಥ್ ನೀಡಿದೆ. ಪನ್ನಗಾಭರಣ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದೊಂದು ಇನ್ವೆಸ್ಟಿಗೇಟಿವ್ ಕ್ರೈಮ್ ಥ್ರಿಲ್ಲರ್ ಕಥಾಹಂದರದ ಚಿತ್ರವಾಗಿದ್ದು, ವಿಶಾಲ್ ಆತ್ರೇಯ ನಿರ್ದೇಶನದಲ್ಲಿ ಮೂಡಿಬಂದಿದೆ.

ಇದೀಗ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಹೊಸ ಐಡಿಯಾ ಮಾಡಿದೆ. ಅದರಂತೆ ಇತ್ತೀಚೆಗಷ್ಟೆ ರಿಲೀಸ್ ಆದ ‘ದೂರಿ ಲಾಲಿ’ ಹಾಡನ್ನು ಬಳಸಿಕೊಂಡು ತಮ್ಮ ಮಗುವನ್ನು ಮಲಗಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಬೇಕು. ಹಾಗೆ ಶೇರ್ ಮಾಡಿದ ಅತ್ಯುತ್ತಮ ಮೂರು ಹಾಡುಗಳನ್ನು ಚಿತ್ರತಂಡ ಆಯ್ಕೆ ಮಾಡಿಕೊಂಡು, ವಿಡಿಯೋ ಮಾಡಿದ ಮೂವರು ಮೇಘನಾ ರಾಜ್ ಭೇಟಿಯಾಗಿ, ಅವರ ಜತೆ ಊಟ ಮಾಡುವ ಅವಕಾಶ ನೀಡಲಿದೆ. ಈ ಬಗ್ಗೆ ನಿರ್ದೇಶಕ ವಿಶಾಲ್, ‘ಮಕ್ಕಳನ್ನು ಮಲಗಿಸಲು ತಾಯಂದಿರು ಲಾಲಿ ಹಾಡುವುದು ಸಾಮಾನ್ಯ. ನಮ್ಮ ಚಿತ್ರದಲ್ಲೂ ‘ದೂರಿ ಲಾಲಿ’ ಸಾಂಗ್ ಇರುವ ಕಾರಣ ತಾಯಂದಿರಿಗೆ ಕನೆಕ್ಟ್ ಆಗುತ್ತದೆ ಅಂತನ್ನಿಸಿತು. ಹೀಗಾಗಿ ಈ ಸ್ಪರ್ಧೆ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.

ಪ್ರೇಕ್ಷಕರೂ ಇಲ್ಲಿ ಪಾತ್ರಗಳೇ!
‘ತತ್ಸಮ ತದ್ಭವ’ ಒಂದು ಇನ್ವೆಸ್ಟಿಗೇಟಿವ್ ಕ್ರೈಮ್ ಥ್ರಿಲ್ಲರ್ ಆಗಿದ್ದು, ಕಳೆದಹೋದ ಪತಿಯನ್ನು ಹುಡುಕುವ ಪತ್ನಿಯ ಪಾತ್ರದಲ್ಲಿ ಮೇಘನಾ ರಾಜ್ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ವಿಶಾಲ್, ‘ಇದು ಬೇರೆ ಥ್ರಿಲ್ಲರ್‌ಗಳಂತಿಲ್ಲ. ಕೊನೆಯವರೆಗೂ ಪ್ರೇಕ್ಷಕರನ್ನು ಸೀಟಂಚಲ್ಲಿ ಕುಳಿತುಕೊಳ್ಳುವಂತೆ ಮಾಡುವ ಚಿತ್ರ. ಪ್ರೇಕ್ಷಕರು ತಾವೂ ಕಥೆಯ ಪಾತ್ರದಂತೆ ಅನುಭವಿಸುತ್ತಾರೆ’ ಎಂದು ಹೇಳಿಕೊಳ್ಳುತ್ತಾರೆ. ಸೆಪ್ಟೆಂಬರ್‌ನಲ್ಲಿ ‘ತತ್ಸಮ ತದ್ಭವ’ ತೆರೆಗೆ ಬರುವ ನಿರೀಕ್ಷೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net