'ಸಿಂಧೂರ ಲಕ್ಷ್ಮಣ' ಚಿತ್ರದ ಬಗ್ಗೆ ಏನಂತಾರೆ ತರುಣ್​?

Veera Sindhura Lakshmana - Final
Published on

ಕಳೆದ ಮೂರ್ನಾಲ್ಕು ಸ್ಯಾಂಡಲ್​ವುಡ್​ನಲ್ಲಿ 'ಸಿಂಧೂರ ಲಕ್ಷ್ಮಣ' ಚಿತ್ರದ ಬಗ್ಗೆ ಮೇಲಿಂದ ಮೇಲೆ ಸುದ್ದಿ ಬರುತ್ತಿದೆ. 'ಸಿಂಧೂರ ಲಕ್ಷ್ಮಣ' ನಾಗಿ ದರ್ಶನ್​ ಅಭಿನಯಿಸುತ್ತಾರಂತೆ, 'ರಾಬರ್ಟ್​' ನಿರ್ಮಿಸುತ್ತಿರುವ ಉಮಾಪತಿ ಗೌಡಿ ಚಿತ್ರವನ್ನು ನಿರ್ಮಿಸಿದರೆ, ತರುಣ್ ಸುಧೀರ್​ ನಿರ್ದೇಶನ ಮಾಡುತ್ತಾರಂತೆ ಎಂಬಂತಹ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ.

ಅದಕ್ಕೆ ಸರಿಯಾಗಿ, ತರುಣ್​ ಅವರ ತಂದೆ ನಟ ಸುಧೀರ್​ ಅವರು ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ 'ವೀರ ಸಿಂಧೂರ ಲಕ್ಷ್ಮಣ' ನಾಟಕವನ್ನಾಡಿದ್ದರು. 'ಸಿಂಧೂರ ಲಕ್ಷ್ಮಣ' ನ ಪಾತ್ರದಲ್ಲಿ ಜನಪ್ರಿಯರಾಗಿದ್ದರು. ತಂದೆಯವರ ಜನಪ್ರಿಯ ನಾಟಕವನ್ನು ಮಗ ತೆರೆಗೆ ತರುತ್ತಿದ್ದಾರೆ ಎಂದು ಸಹಜವಾಗಿಯೇ ಸುದ್ದಿಯಾಗಿತ್ತು.

ಈ ವಿಷಯವನ್ನು ತರುಣ್ ಅವರ ಬಳಿ ಕೇಳಿದರೆ, ಅಧಿಕೃತವಾಗಿ ಏನೂ ಆಗಿಲ್ಲ ಎನ್ನುತ್ತಾರೆ. ಅಷ್ಟೇ ಅಲ್ಲ, ಚಿತ್ರ ಸೆಟ್ಟೇರಿದರೂ, ಅದಕ್ಕೆ ಏನಿಲ್ಲವೆಂದರೂ ಎರಡ್ಮೂರು ವರ್ಷಗಳಾದರೂ ಬೇಕು ಎನ್ನುವುದು ಅವರ ಅಭಿಪ್ರಾಯ.

ಈ ಕುರಿತು 'ವಿಜಯವಾಣಿ'ಯೊಂದಿಗೆ ಮಾತನಾಡಿದ ಅವರು, 'ನಿಜ ಹೇಳಬೇಕೆಂದರೆ ಅಫಿಶಿಯಲಿ ಏನೂ ಆಗಿಲ್ಲ. ದರ್ಶನ್​ ಅವರು ನಮ್ಮ ನಿರ್ಮಾಪಕ ಉಮಾಪತಿ ಗೌಡ ಅವರ ಬಳಿ ಮಾತನಾಡುವಾಗ, 'ಸಿಂಧೂರ ಲಕ್ಷ್ಮಣ' ಚಿತ್ರ ಮಾಡಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದರಂತೆ. ಚಿತ್ರವನ್ನು ತರುಣ್​ನಿಂದ ಮಾಡಿಸಿ ಎಂದಿದ್ದರಂತೆ. ಅದು ಬಿಟ್ಟು ಇನ್ನೇನೂ ಆಗಿಲ್ಲ' ಎನ್ನುತ್ತಾರೆ ತರುಣ್​.

ಒಂದು ಪಕ್ಷ ಎಲ್ಲಾ ಕೂಡಿಬಂದು, 'ಸಿಂಧೂರ ಲಕ್ಷ್ಮಣ' ಚಿತ್ರವನ್ನು ನಿರ್ದೇಶಿಸುವಂತಾದರೆ, ಅದು ತಮ್ಮ ಪಾಲಿಗೆ ಡಬ್ಬಲ್​ ಧಮಾಕಾ ಎನ್ನುತ್ತಾರೆ ತರುಣ್​. 'ಮೊದಲಿಗೆ ಇದೊಂದು ಐತಿಹಾಸಿಕ ಚಿತ್ರ. ಒಬ್ಬ ನಿರ್ದೇಶಕನಾಗಿ ಇಂಥದ್ದೊಂದು ಚಿತ್ರ ಮಾಡುವುದು ನಿಜಕ್ಕೂ ಖುಷಿಯ ವಿಚಾರ. ಇನ್ನೊಂದು ಖುಷಿ ಎಂದರೆ, ಇದು ದರ್ಶನ್​ ಅವರ ಚಿತ್ರ. ಹಾಗಾಗಿ ಎಲ್ಲಾ ಕೂಡಿಬಂದರೆ, ನನಗಿಂಥ ಖುಷಿಪಡುವವರು ಬೇರೆ ಯಾರೂ ಇಲ್ಲ. ಆದರೆ, ಸದ್ಯಕ್ಕೆ ಈ ಸಿನಿಮಾ ಆಗುವುದು ಕಷ್ಟ. ಶುರುವಾದರೂ ಎರಡ್ಮೂರು ವರ್ಷಗಳಾದರೂ ಬೇಕು. ದರ್ಶನ್​ ಇನ್ನೂ ಎರಡ್ಮೂರು ಚಿತ್ರಗಳಲ್ಲಿ ನಟಿಸಬೇಕಿರುವುದರಿಂದ, ಅವೆಲ್ಲಾ ಮುಗಿದ ಮೇಲಷ್ಟೇ ಈ ಚಿತ್ರ ಪ್ರಾರಂಭವಾಗಬಹುದು' ಎನ್ನುತ್ತಾರೆ ತರುಣ್.

ಅಂದಹಾಗೆ, ತರುಣ್​ ಸದ್ಯಕ್ಕೆ 'ರಾಬರ್ಟ್​​' ಚಿತ್ರದ ಬಗ್ಗೆ ಫುಲ್​ ಫೋಕಸ್​ ಆಗಿದ್ದಾರಂತೆ. 'ಶೇ 99ರಷ್ಟು ರೆಡಿ ಇದೆ. ಅಲ್ಲೊಂಚೂರು, ಇಲ್ಲೊಂಚೂರು ಕೆಲಸವಿರಬಹುದು. ಅದನ್ನು ಮುಗಿಸಿದರೆ, ಚಿತ್ರದ ಫಸ್ಟ್​ ಕಾಪಿ ತೆಗೆಯಬಹುದು. ಆದರೆ, ಸದ್ಯಕ್ಕೆ ಚಿತ್ರಮಂದಿರಗಳು ಇನ್ನೂ ಪ್ರಾರಂಭವಾಗಿಲ್ಲ. ಹಾಗಾಗಿ ನಾವು ಸಹ ಕಾಯುತ್ತಿದ್ದೇವೆ. ಚಿತ್ರ ಪ್ರದರ್ಶನಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸೆನ್ಸಾರ್​ ಮಾಡಿಸಿ, ಆಗಿನ ಸಂದರ್ಭ ನೋಡಿಕೊಂಡು ಬಿಡುಗಡೆ ಮಾಡುತ್ತೇವೆ' ಎನ್ನುತ್ತಾರೆ ತರುಣ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net