

ಆನೇಕಲ್: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಶುಕ್ರವಾರ ನಡೆದ ರಾಜಕೀಯ ಪಾದಯಾತ್ರೆಯಲ್ಲಿ ಹೃದಯಾಘಾತದಿಂದ ಕುಸಿದುಬಿದ್ದಿದ್ದ ಟಾಲಿವುಡ್ ನಟ ತಾರಕ್ ರತ್ನ ಅವರ ಆರೋಗ್ಯ ಸ್ಥತಿ ಗಂಭೀರವಾಗಿದ್ದು, ಬ್ಲಾಕ್ ಆಗಿರುವ ರಕ್ತನಾಳಗಳ ಸರಿಪಡಿಸಲು ವೈದ್ಯರು ಯತ್ನ ನಡೆಸಿದ್ದಾರೆ.
ತೆಲುಗು ನಟ ಮತ್ತು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಮೊಮ್ಮಗ ಹಾಗೂ ಹಲವು ತೆಲುಗು ಚಿತ್ರಗಳಲ್ಲಿ ನಟಿಸಿರುವ ತಾರಕ್ ರತ್ನ, ಶುಕ್ರವಾರ ಹೃದಯಾಘಾತಕ್ಕೀಡಾಗಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿತ್ತು.
ತೀವ್ರ ಹೃದಯಾಘಾತ ಹಿನ್ನೆಲೆ ಹೃದಯದ ರಕ್ತ ನಾಳಗಳು ಬ್ಲಾಕ್ ಆಗಿದ್ದು, ಇಂಟ್ರಾ-ಅಯೋರ್ಟಿಕ್ ಪಂಪ್ (ABP) ಮತ್ತು ವ್ಯಾಸೋಆಕ್ಟಿವ್ ನೆರವಿನಿಂದ ಹೃದಯ ಚಿಕಿತ್ಸೆ ಜತೆಗೆ ಆಂಜಿಯೋಪ್ಲ್ಯಾಸ್ಟಿ ಮೂಲಕ ಹಾನಿಗಳಗಾದ ರಕ್ತನಾಳಗಳಿಗೆ ಸ್ಟಂಟ್ ಅಳವಡಿಕೆ ಕೆಲಸ ನಡೆಯುತ್ತಿದೆ. ಸ್ಟಂಟ್ ಅಳವಡಿಕೆ ನಡುವೆಯು ರಕ್ತಸ್ರಾವ ನಿಲ್ಲದಿರುವುದರಿಂದ ಚಿಕಿತ್ಸೆ ಮುಂದುವರೆದಿದೆ. ಮುಂದಿನ 24 ಗಂಟೆಗಳ ಚಿಕಿತ್ಸೆ ನಿರ್ಣಾಯಕ ಎಂದು ಹೇಳಲಾಗಿದೆ. ಏಕೆಂದರೆ, ತಾರಕ್ ರಾಮ್ ಅಪರೂಪದ ಮೆಲೆನಾ ರೋಗದಿಂದ ಬಳಲುತ್ತಿದ್ದು, ಈ ರೋಗಿಗಳಿಗೆ ಅಧಿಕ ರಕ್ತಸ್ರಾವ ಉಂಟಾಗುತ್ತದೆ. ಇದರಿಂದ ಆರೋಗ್ಯದಲ್ಲಿ ಸಾಕಷ್ಟು ತೊಡಕುಗಳಾಗುವ ಸಾಧ್ಯತೆಗಳಿರುತ್ತವೆ.
ಇನ್ನು, ತಾರಕ್ ರತ್ನ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ನೋಡುವುದಕ್ಕೆ ದೊಡ್ಡ ಸಂಖ್ಯೆಯಲ್ಲಿ ಅವರ ಕುಟುಂಬವರ್ಗದವರು ನಾರಾಯಣ ಹೃದಯಾಲಯ ಆಸ್ಪತ್ರೆಗೆ ಬರುತ್ತಿದ್ದಾರೆ. ಎನ್.ಟಿ.ಅರ್ ಮಗಳು ಪುರಂದೇಶ್ವರಿ, ಹರಿಕೃಷ್ಣ ಅವರ ಮಗಳು ಸುಹಾಸಿನಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಕುಟುಂಬವರ್ಗದವರು ಮತ್ತು ಅಭಿಮಾನಿಗಳು ಇಲ್ಲಿನ ನಾರಾಯಣ ಹೆಲ್ತ್ ಸಿಟಿ ಬಳಿ ಜಮಾವಣೆಗೊಂಡಿದ್ದಾರೆ.