ತಾರಕ್​ಗೆ ಪ್ಯಾನ್​ ಇಂಡಿಯಾ ಚಿತ್ರ ಬೇಡವಂತೆ, ಲೋಕಲ್​ ಸಾಕಂತೆ!

Tarak
Published on

ಪ್ರಾದೇಶಿಕ ಭಾಷೆಯ ಎಲ್ಲಾ ಚಿತ್ರರಂಗಗಳ ಎಲ್ಲಾ ಹೀರೋಗಳಿಗೂ ಬಹುಶಃ ಅದೊಂದು ಆಸೆ ಇದ್ದೇ ಇರುತ್ತದೆ. ತಮ್ಮ ಚಿತ್ರರಂಗದಲ್ಲಿ ಸ್ಟಾರ್​ ಆಗಿ ಮೆರೆಯುವುದರ ಜತೆಗೆ, ಬಾಲಿವುಡ್​ಗೆ ಹೋಗಬೇಕು, ಪ್ಯಾನ್​ ಇಂಡಿಯಾ ಹೀರೋ ಆಗಿ ಗುರುತಿಸಿಕೊಳ್ಳಬೇಕು ಅಂತ.

ಆದರೆ, ತಾರಕ್​ ಅಲಿಯಾಸ್​ ಜ್ಯೂನಿಯರ್​ ಎನ್​.ಟಿ.ಆರ್​ಗೆ ಮಾತ್ರ ಮೊದಲಿನಿಂದಲೂ ಅಂಥದ್ದೊಂದು ಆಸೆ ಇಲ್ಲವಂತೆ. ತೆಲುಗು ಚಿತ್ರರಂಗದಿಂದ ಗುರುತಿಸಿಕೊಂಡ ಅವರು, ತೆಲುಗು ಚಿತ್ರರಂಗದಲ್ಲೇ ಮಿಂಚಿದರೆ ಸಾಕು ಎಂಬುದು ಅವರ ಆಸೆಯಂತೆ.

ಈಗಾಗಲೇ ಪ್ರಭಾಸ್​ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಗುರುತಿಸಿಕೊಂಡಿದ್ದಾರೆ. ರಾಮ್​ಚರಣ್​ ತೇಜ, ರಾಣಾ ದಗ್ಗುಬಾಟಿ ಮುಂತಾದವರು ಹಾಲಿವುಡ್​ಗೆ ಹೋಗಿ ಬಂದಿದ್ದಾರೆ. ಆದರೆ, ತಾರಕ್​ ಮಾತ್ರ ತೆಲುಗು ಚಿತ್ರರಂಗದಿಂದ ಎಲ್ಲೂ ಕದಲಿಲ್ಲ. ಅಲ್ಲಿಗೆ ಜೀರೋ ಆಗಿ ಬಂದವರು, ಸೂಪರ್​ ಹೀರೋ ಆಗಿ ಬೆಳೆದಿದ್ದಾರೆ.

ಈ ಮಧ್ಯೆ ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್​' ಚಿತ್ರವು ತೆಲುಗು ಅಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಪ್ಯಾನ್​ ಇಂಡಿಯಾ ಸಿನಿಮಾ ಆಗಿ ಅದು ಹೊರಹೊಮ್ಮಲಿದೆ. ಆ ನಂತರ ತಾರಕ್​ ಅಭಿನಯದ ಚಿತ್ರಗಳೆಲ್ಲಾ ಪ್ಯಾನ್​ ಇಂಡಿಯಾ ಲೆವೆಲ್​ಗೆ ಇರುತ್ತದೆ ಎಂದುಕೊಂಡರೆ ಅದು ತಪ್ಪು.

ಆ ಚಿತ್ರ ಮುಗಿಯುತ್ತಿದ್ದಂತೆಯೇ, ತಾರಕ್​ ತಮ್ಮದೇ ಸ್ಟೈಲ್​ನ ಇನ್ನೊಂದು ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಈ ಚಿತ್ರವನ್ನು ತ್ರಿವಿಕ್ರಮ್​ ಶ್ರೀನಿವಾಸ್​ ನಿರ್ದೇಶನ ಮಾಡುತ್ತಿದ್ದು, ಇದೊಂದು ಪಕ್ಕಾ ಫ್ಯಾಮಿಲಿ ಕಮರ್ಷಿಯಲ್​ ಚಿತ್ರ ಆಗಿರಲಿದೆಯಂತೆ.

'ಬೃಂದಾವನಂ' ನಮತರ ಪಕ್ಕಾ ಫ್ಯಾಮಿಲಿ ಚಿತ್ರದಿಂದ ದೂರವೇ ಉಳಿದಿರುವ ತಾರಕ್​, ಈಗ ಅಂಥದ್ದೇ ಒಂದು ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ತಮಗೆ ಪ್ಯಾನ್​ ಇಂಡಿಯಾ ಲೆವೆಲ್​ನ ಚಿತ್ರಗಳು ಬೇಡ, ಲೋಕಲ್​ ಮಾರ್ಕೆಟ್​ಗೆ ಸರಿಹೊಂದುವಂತಹ ಚಿತ್ರ ಬೇಕು ಎಂದು ನಂಬಿರುವ ತಾರಕ್​, ಅದಕ್ಕೆ ತಕ್ಕಂತಹ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net