ಇದೊಂದು ಪಾತ್ರವನ್ನು ತಾರಾ ಮಾಡಿರಲಿಲ್ಲವಂತೆ ... ಯಾವುದು ಆ ಪಾತ್ರ?

Tara - Ratnan Prapancha - Final
Published on

ಬೆಂಗಳೂರು: ಹಿರಿಯ ನಟಿ ತಾರಾ ಇದುವರೆಗೂ ಅದೆಷ್ಟೋ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇದುವರೆಗೂ ಅಂಥದ್ದೊಂದು ಪಾತ್ರವನ್ನು ಯಾವುದೇ ಚಿತ್ರದಲ್ಲೂ ಮಾಡಿರಲಿಲ್ಲವಂತೆ. ಈಗ ಆ ಪಾತ್ರ ಮಾಡುವುದಕ್ಕೆ ಅವರಿಗೆ ಅವಕಾಶ ಸಿಕ್ಕಿದೆ. ಇಷ್ಟಕ್ಕೂ ಆ ಪಾತ್ರ ಯಾವುದು ಎಂಬ ಪ್ರಶ್ನೆ ಬರುವುದು ಸಹಜ.

ತಾರಾ ತಮ್ಮ ವೇತ್ತಿಜೀವನದಲ್ಲಿ ಇದುವರೆಗೂ ಯಾವುದೇ ಚಿತ್ರದಲ್ಲಿ ಊರೊಂದರ ಗಟ್ಟಿಗಿತ್ತಿ ಗೌಡತಿಯ ಪಾತ್ರದಲ್ಲಿ ನಟಿಸಿರಲಿಲ್ಲವಂತೆ. ಈಗ ಅವರಿಗೆ 'ಡಾಲಿ' ಧನಂಜಯ್​ ಅಭಿನಯದ 'ರತ್ನನ್​ ಪ್ರಪಂಚ' ಚಿತ್ರದಲ್ಲಿ ಉತ್ತರ ಕರ್ನಾಟಕ ಮೂಲದ ಊರೊಂದರ ಗಟ್ಟಿಗಿತ್ತಿ ಗೌಡತಿಯಾಗಿ ನಟಿಸುವ ಅವಕಾಶ ಸಿಕ್ಕಿದೆ.

ಈ ಕುರಿತು ಮಾತನಾಡಿರುವ ಅವರು, ‘ಕಥೆಯ ಒಂದೆಳೆ ಹೇಳುತ್ತಿದ್ದಂತೆ, ನನಗೆ ಇಷ್ಟವಾಯ್ತು.ಆದರೆ ಜೊತೆಗೆ ಆಳಕು ಆಯ್ತು..ಅದರಲ್ಲೂ ನಾನು ಈ ರೀತಿಯ ಪಾತ್ರವನ್ನು ಇಲ್ಲಿಯವರೆಗೂ ಮಾಡಿಲ್ಲ. ಖಡಕ್​ ಉತ್ತರ ಕರ್ನಾಟಕ ಭಾಷೆಯನ್ನು ಮಾತನಾಡುವ ಹೆಣ್ಣುಮಗಳಾಗಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಮಹಿಳೆಯಾಗಿ ನನ್ನ ಪಾತ್ರ ಸಾಗಲಿದೆ. ನೆಗೆಟಿವ್​ ಶೇಡ್​ ಅಲ್ಲದ, ದೇವತೆಯಂತೆ ಬಿಂಬಿಸುವ ಪಾತ್ರ ಇದು. ಇಂಥ ಪಾತ್ರ ನೀಡಿದಕ್ಕೆ ನಿರ್ದೇಶಕರಿಗೆ ನನ್ನ ಧನ್ಯವಾದ’ ಎನ್ನುವ ತಾರಾ, ಉತ್ತರ ಕರ್ನಾಟಕ ಭಾಷೆ ಕಲಿಯುವುದಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇಡೀ ಸಿನಿಮಾದಲ್ಲಿ ತಾರಾ ಪಾತ್ರ ಮುಖ್ಯವಾಗಿರುವುದರಿಂದ ಬಹುಪಾಲು ಸಿನಿಮಾದಲ್ಲಿ ಅವರೂ ಕಾಣಿಸಿಕೊಳ್ಳುತ್ತಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿಯೇ ಸಂಭಾಷಣೆ ಒಪ್ಪಿಸಬೇಕಿರುವುದರಿಂದ ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಆ ಸೊಗಡನ್ನು ಉಚ್ಚರಿಸುವುದಕ್ಕೆ ತರಬೇತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ.

ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ನಿರ್ಮಾಣ ಮಾಡುತ್ತಿರುವ ರತ್ನನ್​ ಪ್ರಪಂಚ ಸಿನಿಮಾವನ್ನು ‘ದಯವಿಟ್ಟು ಗಮನಿಸಿ’ ಖ್ಯಾತಿಯ ರೋಹಿತ್​ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಧನಂಜಯ್​, ರೆಬಾ ಮೋನಿಕಾ ಜಾನ್​, ಪ್ರಮೋದ್​, ರವಿಶಂಕರ್​ ಗೌಡ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net