ಇನ್ನು ಈ ಆಟದಲ್ಲಿ ನಾನಿಲ್ಲ ... ಹಾಗಂತ ತಾಪ್ಸಿ ಹೇಳಿದ್ದು ಯಾಕೆ?

Tapsee - Kangana 1
Published on

ಸುಶಾಂತ್​ ಸಾವಿನ ಹಿನ್ನೆಲೆಯಲ್ಲಿ ಕಂಗನಾ ಮತ್ತು ಇತರರ ವಿರುದ್ಧ ನಡೆಯುತ್ತಿರುವ ಗಲಾಟೆಗೆ ಕೊನೆಗೂ ಒಂದು ತಿರುವು ಸಿಕ್ಕಿದೆ. ಈಗಾಗಲೇ ಸಾಕಷ್ಟು ಆರೋಪಗಳನ್ನು ಕೇಳಿಸಿಕೊಂಡು, ಅದಕ್ಕೆ ತಕ್ಕ ಉತ್ತರಗಳನ್ನೂ ನೀಡಿರುವ ತಾಪ್ಸಿ, ಇನ್ನು ಈ ಆಟದಲ್ಲಿ ತಾವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ, ತಾಪ್ಸಿ ಪನ್ನು, ಸ್ವರಾ ಭಾಸ್ಕರ್​ ಮತ್ತು ರಿಚಾ ಚಡ್ಡಾ ವಿರುದ್ಧ ತಿರುಗಿ ಬಿದ್ದಿರುವ ಕಂಗನಾ ಅವರನ್ನು ಬಿ ಗ್ರೇಡ್​ ನಟಿಯರು ಎಂದು ಕಂಗನಾ ಕರೆದಿದ್ದರು. ಅಷ್ಟೇ ಆಗಿದ್ದರೆ ಪರವಾಗಿಲ್ಲ. ಕೆಲವರಿಗೆ ಅವರದ್ದೇ ಆದ ಕಮಿಟ್​ಮೆಂಟ್​ ಇರುತ್ತದೆ, ಪ್ರತಿ ತಿಂಗಳು ಇಎಂಐ ಕಟ್ಟುವುದಿರುತ್ತದೆ, ಅದೇ ಕಾರಣಕ್ಕೆ ಅವರು ಬಾಲಿವುಡ್​ನ ಪ್ರಭಾವಿಗಳನ್ನು ಎದುರು ಹಾಕಿಕೊಳ್ಳುತ್ತಿಲ್ಲ ಎಂದು ತಾಪ್ಸಿ, ಸ್ವರಾ ಮತ್ತು ರಿಚಾ ಅವರ ಹೆಸರುಗಳನ್ನು ತೆಗೆಯದೇ ಪರೋಕ್ಷವಾಗಿ ಹೇಳಿದ್ದರು.

ಇದಕ್ಕೆ ತಾಪ್ಸಿ ಪ್ರತ್ಯುತ್ತರವನ್ನೂ ನೀಡಿದ್ದರು. 'ನಮ್ಮ ಬಗ್ಗೆ ಕೆಲವರಿಗೆ ವಿಪರೀತ ಎನ್ನುವಷ್ಟು ಕಾಳಜಿ ಇದೆ. ಚಿತ್ರರಂಗದಲ್ಲಿ ಇಂತಹ ಸಹೃದಯರು ಇದ್ದಾರೆ ಎಂದು ಗೊತ್ತಿರಲಿಲ್ಲ. ಅದರಲ್ಲೂ ಬಿ ಗ್ರೇಡ್​ ನಟಿಯರ ಕುರಿತಾಗಿ ಅವರು ತೋರಿಸುತ್ತಿರುವ ಪ್ರೀತಿ ಮತ್ತು ಗೌರವ ಖುಷಿ ಕೊಡುತ್ತದೆ' ಎಂದು ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದರು.

ಇದಕ್ಕೆ ಕಂಗನಾ ಇನ್ನೇನೋ ಮಾತಾಡಿದ್ದರು. ಹೀಗೆ ಆರೋಪ, ಪ್ರತ್ಯಾರೋಪಗಳಿಂದ ಪ್ರಕರಣ ಎಲ್ಲಿಂದ ಎಲ್ಲಿಗೋ ಹೋಗುತ್ತಿರುವುದನ್ನು ನೋಡಿ, ಸ್ವತಃ ತಾಪ್ಸಿ ಸುಸ್ತಾಗಿದ್ದಾರೆ. ಇದೆಲ್ಲಕ್ಕೂ ಒಂದು ಅಂತ್ಯ ಹಾಡಬೇಕು ಎಂದು ತೀರ್ಮಾನಿಸಿರುವ ಅವರು, ಇನ್ನು ಮುಂದೆ ಈ ವಿಷಯವಾಗಿ ತಾವು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಈ ವಿಷಯ ಎಲ್ಲಿಂದ ಎಲ್ಲಿಗೋ ಹೋಗುತ್ತಿದೆ. ಈ ವಿಚಾರವಾಗಿ ನನ್ನ ನಿಲುವು ಬದಲಾಗುವುದರೊಳಗೆ, ನಾನು ಸೈನ್​ ಔಟ್​ ಮಾಡುವುದು ವಾಸಿ. ಇನ್ನು ಮುಂದೆ ಈ ಆಟದಲ್ಲಿ ನಾನಿಲ್ಲ' ಎಂದು ತಾಪ್ಸಿ ಹೇಳಿ ಸುಮ್ಮನಾಗಿದ್ದಾರೆ.

ತಾಪ್ಸಿಯೇನೋ ಸುಮ್ಮನಾಗಿದ್ದಾರೆ. ಕಂಗನಾ ಈ ವಿಷಯವನ್ನು ಇನ್ನೂ ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೋ ಎಂಬ ಕುತೂಹಲ ಮಾತ್ರ ಎಲ್ಲರಲ್ಲೂ ಇದ್ದೇ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net