

ಮುಂಬೈ: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿದ್ದಾರೆ ಎಂಬ ಆರೋಪ ಹೊತ್ತು ತೀವ್ರ ವಿವಾದಕ್ಕೆ ಈಡಾಗಿದ್ದ ತಾಂಡವ್ ವೆಬ್ ಸೀರಿಸ್ ಬಗ್ಗೆ ಒಟಿಟಿ ವೇದಿಕೆಯಾದ ಅಮೆಜಾನ್ ಪ್ರೈಂ ವಿಡಿಯೋ ಕ್ಷಮೆ ಕೇಳಿದೆ.
ಮಂಗಳವಾರ ಪ್ರಕಟಣೆ ಹೊರಡಿಸಿರುವ ಅಮೆಜಾನ್ ಪ್ರೈಂ ಇಂಡಿಯಾ ವಿಭಾಗದ ಕಂಟೆಂಟ್ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಅವರು ಈ ವಿಷಯ ಪ್ರಕಟಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್ ತಾಂಡವ್ ವಿವಾದಕ್ಕೆ ಸಂಬಂಧಿಸಿದಂತೆ ಅಪರ್ಣಾ ಪುರೋಹಿತ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಅಮೇಜಾನ್ ಪ್ರೈಂ ವಿಡಿಯೋದಿಂದ ಈ ಪ್ರಕಟಣೆ ಹೊರ ಬಿದ್ದಿದೆ.
ತಾಂಡವ್ ವೆಬ್ ಸೀರಿಸ್ ನಲ್ಲಿ ಹಿಂದೂಗಳ ಭಾವನೆಯನ್ನು ಗಾಸಿಗೊಳಿಸಿದ್ದಕ್ಕೆ ಅಮೆಜಾನ್ ಪ್ರೈಂ ಭೇಷರತ್ ಕ್ಷಮೆ ಕೇಳಿದೆ. ಚಿತ್ರತಂಡದ ವಿರುದ್ಧ ದೇಶದ ವಿವಿದೆಡೆ 14 ಎಫ್ಐಆರ್ ದಾಖಲಾಗಿದ್ದವು. ‘ತಾಂಡವ್ ವೆಬ್‌ಸರಣಿಯ ಕೆಲವು ದೃಶ್ಯಗಳು ವೀಕ್ಷಕರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿರುವ ಬಗ್ಗೆ ಅಮೆಜಾನ್ ಪ್ರೈಮ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ. ಚಿತ್ರದಲ್ಲಿನ ಆಕ್ಷೇಪಾರ್ಹ ಸನ್ನಿವೇಶಗಳನ್ನು ಈಗಾಗಲೇ ತೆಗೆದು ಹಾಕಲಾಗಿದೆ. ವೀಕ್ಷಕರ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಆ ದೃಶ್ಯಗಳಿಂದ ನೋವುಂಟಾಗಿದ್ದರೆ ಕ್ಷಮೆ ಇರಲಿ ಎಂದು ಜನರಲ್ಲಿ ಕೇಳಿಕೊಂಡಿದೆ.
ಅಲಿ ಅಬ್ಬಾಸ್ ಜಾಫರ್ ಅವರ ನಿರ್ದೇಶನದ ತಾಂಡವ್ ವೆಬ್ ಸೀರಿಸ್ನಲ್ಲಿ ಸೈಫ್ ಅಲಿ ಖಾನ್, ಟ್ವಿಂಕಲ್ ಖನ್ನಾ ಸೇರಿದಂತೆ ಅನೇಕರು ನಟಿಸಿದ್ದಾರೆ.